ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸುವುದು ಅಗತ್ಯ
ಹೊಸದಿಲ್ಲಿ, ಎ.27: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶನಿವಾರ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದು, ‘ಭಾರತದ ಗೋಡೆ’ ಖ್ಯಾತಿಯ, ಜೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದ ಅಗತ್ಯವಿದೆ. ಬಿಸಿಸಿಐ ಹೊಸದಾಗಿ ಸೃಷ್ಟಿಸಲಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುತ್ತಿದ್ದು, ಈಗಾಗಲೇ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಹುದ್ದೆಯಲ್ಲಿರುವ ದ್ರಾವಿಡ್ ಈ ಹುದ್ದೆಗೆ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.
ಶನಿವಾರ ಬಿಸಿಸಿಐನ ಆಡಳಿತಗಾರರ ಸಮಿತಿಯ (ಸಿಒಎ) ಸಭೆಯ ಬಳಿಕ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು ‘‘ ಎಲ್ಲ ಬಿಸಿಸಿಐ ಹುದ್ದೆಗಳಂತೆ ಈ ಹುದ್ದೆಗೂ ಪಾರದರ್ಶಕ ಅರ್ಜಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಕಿರಿಯರ ರಾಷ್ಟ್ರೀಯ ತಂಡಗಳ ಕೋಚ್ ಹುದ್ದೆಯಲ್ಲಿರುವ ದ್ರಾವಿಡ್ ಸಹಜವಾಗಿಯೇ ಈ ಹುದ್ದೆಗೆ ಮುಖ್ಯ ಅಭ್ಯರ್ಥಿ’’ ಎಂದರು. ಕೆಲವು ಹುದ್ದೆಗಳ ನೇಮಕದ ಕುರಿತು ಪ್ರಶ್ನೆಗಳು ಎದ್ದಿರುವ ಕಾರಣ ಬಿಸಿಸಿಐ ನೇರ ನೇಮಕಾತಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ದ್ರಾವಿಡ್ ಹೊಸ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದ ಅಗತ್ಯವಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಅವಧಿ ಕೂಡ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಬಳಿಕ ಮುಗಿಯಲಿದ್ದು ಅವರೂ ಮರು ಅರ್ಜಿ ಸಲ್ಲಿಸಬೇಕಾಗಿದೆ.