ಏಕದಿನ ಕ್ರಿಕೆಟ್ ಸ್ಥಾನಮಾನ ಪಡೆದ ಪಪುವಾ ನ್ಯೂಗಿನಿ
ದುಬೈ, ಎ.27: ಈಗಾಗಲೇ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2ಕ್ಕೆ ಅರ್ಹತೆ ಪಡೆದಿರುವ ಒಮಾನ್ ತಂಡವನ್ನು ಮಣಿಸಿರುವ ಪಪುವಾ ನ್ಯೂಗಿನಿ(ಪಿಎನ್‌ಜಿ)ತಂಡ ಏಕದಿನ ಕ್ರಿಕೆಟ್ ಸ್ಥಾನಮಾನ ಪಡೆಯುವ ಜೊತೆಗೆ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್-2ರಲ್ಲಿ ಸ್ಥಾನ ಪಡೆದಿದೆ.
ಏಕದಿನ ಸ್ಥಾನಮಾನ ಪಡೆಯಲು ಪಿಎನ್‌ಜಿ ತಂಡಕ್ಕೆ ಒಮಾನ್ ವಿರುದ್ಧ ಜಯ ಸಾಧಿಸಬೇಕಾಗಿತ್ತು. ಟೂರ್ನಮೆಂಟ್‌ನ ಫಲಿತಾಂಶ ತನ್ನ ಪರವಾಗಿ ಇರಬೇಕಾದ ಅಗತ್ಯವಿತ್ತು. ಪಿಎನ್‌ಜಿ ತಂಡ ಒಮಾನ್ ವಿಧಿಸಿರುವ 145 ರನ್ ಗುರಿಯನ್ನು ಸುಲಭವಾಗಿ ತಲುಪಿತು ಎಂದು ಐಸಿಸಿ ತಿಳಿಸಿದೆ.
ಕೆನಡಾ ತಂಡಕ್ಕೆ ಅಗ್ರ-4ರಲ್ಲಿ ಸ್ಥಾನ ಪಡೆದು ಏಕದಿನ ಸ್ಥಾನಮಾನ ಪಡೆಯುವ ಅವಕಾಶವಿತ್ತು. ಈ ಸಾಧನೆ ಮಾಡಲು ರನ್ ಚೇಸಿಂಗ್‌ಗೆ ತೊಡಗಿದ್ದ ಅಮೆರಿಕವನ್ನು 212 ರನ್‌ಗೆ ನಿಯಂತ್ರಿಸುವ ಅಗತ್ಯವಿತ್ತು. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಅಮೆರಿಕ 9 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಕೆನಡಾ ತಂಡ ಅಮೆರಿಕ ವಿರುದ್ಧ 40 ರನ್‌ಗಳಿಂದ ಜಯ ಸಾಧಿಸಲು ಯಶಸ್ವಿಯಾಯಿತು. ಆದರೆ, ನೆಟ್ ರನ್‌ರೇಟ್ ಆಧಾರದಲ್ಲಿ ಟೂರ್ನಿಯಿಂದ ಹೊರ ನಡೆದಿತ್ತು. ಹಾಂಕಾಂಗ್ ತಂಡವನ್ನು 151 ರನ್‌ಗಳಿಂದ ಮಣಿಸಿರುವ ನಮೀಬಿಯಾ ಅಗ್ರ-4ರಲ್ಲಿ ಸ್ಥಾನ ಪಡೆದಿದೆ. ನಮೀಬಿಯಾ ಗೆಲುವಿನೊಂದಿಗೆ ಗ್ರೂಪ್ ಹಂತದ ಪಂದ್ಯ ಕೊನೆಗೊಂಡಿದೆ.
ಪಿಎನ್‌ಜಿ ಹಾಗೂ ನಮೀಬಿಯಾ ತಂಡಗಳು ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್-2ರಲ್ಲಿ ಒಮಾನ್, ಅಮೆರಿಕ, ಸ್ಕಾಟ್ಲೆಂಡ್, ನೇಪಾಳ ಹಾಗೂ ಯುಎಇ ತಂಡವನ್ನು ಸೇರಿಕೊಂಡಿದೆ. 2023ರ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ಮೊದಲು ತಂಡಗಳು ಎರಡೂವರೆ ವರ್ಷಗಳ ಅವಧಿಯಲ್ಲಿ ಪರಸ್ಪರ 36 ಏಕದಿನ ಪಂದ್ಯಗಳನ್ನು ಆಡಲಿದೆ.