×
Ad

ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷದ ಐಪಿಎಲ್ ಪ್ಲೇ-ಆಫ್‌ಗೆ ತೇರ್ಗಡೆಯಾದ ಮೊದಲ ತಂಡ

Update: 2019-04-28 10:30 IST

ಜೈಪುರ, ಎ.28: ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ರಾತ್ರಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಈ ವರ್ಷದ ಐಪಿಎಲ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ರಾಜಸ್ಥಾನ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.

12 ಪಂದ್ಯಗಳಲ್ಲಿ 16 ಅಂಕ ಗಳಿಸಿರುವ ಚೆನ್ನೈ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿಲ್ಲದೆ ಈ ವರ್ಷದ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿದೆ. ಧೋನಿ ಪಡೆ ಇನ್ನುಳಿದ 2 ಲೀಗ್ ಪಂದ್ಯಗಳಲ್ಲಿ ಸೋಲನುಭವಿಸಿದರೂ ಅಗ್ರ-4ರಲ್ಲಿ ತನ್ನ ಸ್ಥಾನ ಕಾಯ್ದುಕೊಳ್ಳಲಿದೆ.

 ಎರಡು ವರ್ಷಗಳ ನಿಷೇಧ ಬಳಿಕ ಐಪಿಎಲ್‌ಗೆ ವಾಪಸಾದ ನಂತರ ಚೆನ್ನೈ ಸತತ ಎರಡನೇ ಬಾರಿ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ. ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಪ್ರತಿ ಐಪಿಎಲ್‌ನಲ್ಲಿ ಅಗ್ರ-4 ಸ್ಥಾನ ಕಾಯ್ದುಕೊಂಡ ಏಕೈಕ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಸ್ತುತ ಚೆನ್ನೈ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿದೆ.

11 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 5ನೇ ಸ್ಥಾನದಲ್ಲಿದೆ. ಶನಿವಾರ ಭರ್ಜರಿ ಜಯ ಸಾಧಿಸಿರುವ ರಾಜಸ್ಥಾನ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಹಿಂದಿಕ್ಕಿ ಆರನೇ ಸ್ಥಾನ ಪಡೆದಿದೆ.

ಕೋಲ್ಕತಾ ಹಾಗೂ ಬೆಂಗಳೂರು ಅಂಕಪಟ್ಟಿಯಲ್ಲಿ ಕ್ರಮವಾಗಿ ಏಳನೇ ಹಾಗೂ 8ನೇ ಸ್ಥಾನದಲ್ಲಿದೆ. ಸತತ 6 ಪಂದ್ಯಗಳಲ್ಲಿ ಸೋತಿರುವ ಕೋಲ್ಕತಾ ತನ್ನ ಅದೃಷ್ಟ ಬದಲಾಗಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆರ್‌ಸಿಬಿ ತಂಡ ಇದೀಗ ಗೆಲುವಿನ ಲಯಕ್ಕೆ ಮರಳಿದ್ದು ಇದೇ ವೇಗ ಮುಂದುವರಿಸಲು ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News