ಬಾಕ್ಸರ್ ಅಮಿತ್ ಪಾಂಘಲ್ ನಾಮನಿರ್ದೇಶನ
ಹೊಸದಿಲ್ಲಿ, ಎ.30: 2018ರ ಏಶ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಬಾಕ್ಸರ್ ಅಮಿತ್ ಪಾಂಘಲ್‌ರನ್ನು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತೊಮ್ಮೆ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನ ಲೈಟ್ ಫ್ಲೈವೈಟ್ ವಿಭಾಗದ (49 ಕಿ.ಗ್ರಾಂ. ವಿಭಾಗ) ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್‌ಬಾಯ್ ದಸ್ಮಟೋವ್‌ರನ್ನು ಸೋಲಿಸಿ ಅಮಿತ್ ಚಿನ್ನದ ಪದಕ ಗೆದ್ದಿದ್ದರು. ಕಳೆದ ವರ್ಷವೂ ಇವರ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ 2012ರಲ್ಲಿ ನಡೆದಿದ್ದ ಉದ್ದೀಪನಾ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಅಮಿತ್‌ಗೆ ಒಂದು ವರ್ಷದ ನಿಷೇಧ ವಿಧಿಸಲಾಗಿರುವ ಕಾರಣ ಅರನ್ನು ಪ್ರಶಸ್ತಿಗೆ ಪರಿಗಣಿಸಿರಲಿಲ್ಲ.
ಈ ವರ್ಷದ ಆರಂಭದಲ್ಲಿ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್‌ಜ ಸ್ಮಾರಕ ಟೂರ್ನಿಯಲ್ಲಿ ಸ್ವರ್ಣ ಗೆದ್ದಿದ್ದ ಅಮಿತ್, ಬಳಿಕ 52 ಕಿ.ಗ್ರಾಂ. ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. ಏಶಿಯನ್ ಚಾಂಪಿಯನ್‌ಷಿಪ್‌ನಲ್ಲಿ 52 ಕಿ.ಗ್ರಾಂ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್‌ಗೆ ಫೈನಲ್‌ನಲ್ಲಿ ಮತ್ತೆ ದಸ್ಮಟೋವ್ ಎದುರಾಳಿಯಾಗಿದ್ದರು. ಈ ಪಂದ್ಯದಲ್ಲೂ ಗೆಲುವು ಸಾಧಿಸಿದ ಅಮಿತ್ ಸ್ವರ್ಣ ಪದಕ ಪಡೆದರು. ಈ ವರ್ಷ ಇವರ ಅದ್ಭುತ ಪ್ರದರ್ಶನವನ್ನು ಗಮನಿಸಿ ಭಾರತೀಯ ಬಾಕ್ಸಿಂಗ್ ಒಕ್ಕೂಟ ಮತ್ತೆ ಅರ್ಜುನ್ ಪ್ರಶಸ್ತಿಗೆ ಶಿಫಾರಸು ಮಾಡಿದೆ.