×
Ad

ತರಬೇತಿಗೆ ಹಣ ಹೊಂದಿಸಲು ರಸ್ತೆ ಬದಿ ಹಣ್ಣು ಮಾರುತ್ತಿರುವ ರಾಷ್ಟ್ರೀಯ ಟೇಕ್ವಾಂಡೋ ಆಟಗಾರ್ತಿ

Update: 2019-05-01 20:12 IST

ಇಂಫಾಲ್, ಎ.1:  ಮಣಿಪುರದ ರಾಷ್ಟ್ರ ಮಟ್ಟದ ಟೇಕ್ವಾಂಡೋ ಆಟಗಾರ್ತಿ ಡಯಾನ ನಿಂಗೊಂಬಂ ದೇಶವನ್ನು ಹಲವು ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ ಹಾಗೂ ಹಾಂಗ್ ಕಾಂಗ್ ನಲ್ಲಿ ಸದ್ಯದಲ್ಲಿಯೇ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಾನ್ವಿತ ಕ್ರೀಡಾಳುವಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆಯಿದೆ. ಅದಕ್ಕಾಗಿ ತಮ್ಮ ಮೆಕ್ಯಾನಿಕ್ ತಂದೆ ಹಾಗೂ ಎಮಾ ಮಾರ್ಕೆಟ್ ನಲ್ಲಿ ಉದ್ಯೋಗಿಯಾಗಿರುವ ತಾಯಿಯ ಮೇಲೆ  ಹೊರೆ ಹಾಕದೇ ಇರಲು ನಿರ್ಧರಿಸಿದ್ದು, ಈಕೆ ಬೆಳ್ಳಂಬೆಳಗ್ಗೆ ಎದ್ದು ರಸ್ತೆ ಬದಿಯಲ್ಲಿ ಫ್ರೂಟ್ ಸಲಾಡ್ ಮಾರಾಟ ಮಾಡುತ್ತಿದ್ದಾರೆ.

ತಮ್ಮ ಹೆತ್ತವರ ಮೂವರು ಮಕ್ಕಳಲ್ಲಿ ಕಿರಿಯರಾಗಿರುವ ಡಯಾನ ಮಂಗಳವಾರ ತಮ್ಮ ಸೋದರಿಯ ಜತೆ ರಾಜಧಾನಿ ಇಂಫಾಲದ ಕಂಗ್ಲಾ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ತಮ್ಮ ಫ್ರೂಟ್ ಸಲಾಡ್ ಮಾರಾಟ ಸ್ಟಾಲ್ ಸ್ಥಾಪಿಸಿದ ಇಬ್ಬರೂ ಅಲ್ಲಿ ತಲಾ ಪ್ಲೇಟ್ ಗೆ 20 ರೂ.ಗಳಂತೆ  ಅಲ್ಲಿಗೆ ಆಗಮಿಸಿದವರಿಗೆ ಫ್ರೂಟ್ ಸಲಾಡ್ ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಅವರು ಈ ರೀತಿ ಸುಮಾರು ರೂ 300ರಿಂದ ರೂ 400 ಲಾಭ ಗಳಿಸುತ್ತಾರೆ.

ಪ್ರತಿ ದಿನ ಬೆಳಿಗ್ಗೆ 3 ಗಂಟೆಗೆ ಏಳುವ ಡಯಾನ ತಮ್ಮ ಸ್ಟಾಲ್ ಕೆಲಸ ಮುಗಿದ ನಂತರ ಸಂಜೆ ಟೇಕ್ವಾಂಡೋ ಪ್ರಾಕ್ಟೀಸ್ ಮಾಡುತ್ತಾರೆ. 2006ರಿಂದ ಈ ಕ್ರೀಡೆಯಲ್ಲಿ ಸಕ್ರಿಯರಾಗಿರುವ ಆಕೆ ಇಲ್ಲಿಯ ತನಕ ಹಲವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News