ಕ್ವಾರ್ಟರ್ ಫೈನಲ್ ನಲ್ಲಿ ಎಡವಿದ ಪ್ರಣಯ್
ಆಕ್ಲಂಡ್, ಮೇ 3: ನ್ಯೂಝಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಕ್ರವಾರ ಭಾರತದ ಎಚ್.ಎಸ್.ಪ್ರಣಯ್ ಜಪಾನ್‌ನ ಐದನೇ ಶ್ರೇಯಾಂಕದ ಕಾಂಟಾ ಸುನೆಯಾಮ ವಿರುದ್ಧ ಸೋತಿದ್ದಾರೆ. ಪ್ರಣಯ್ ಸೋಲಿನ ಮೂಲಕ ಟೂರ್ನಮೆಂಟ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.
ಒಂದು ಗಂಟೆ ಹಾಗೂ 13 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಶ್ರೇಯಾಂಕರಹಿತ ಪ್ರಣಯ್ ವಿಶ್ವದ ನಂ.11ನೇ ಆಟಗಾರ ಸುನೆಯಾಮ ವಿರುದ್ಧ 21-17, 15-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಉಭಯ ಆಟಗಾರರು ಹೆಡ್-ಟು-ಹೆಡ್ ದಾಖಲೆಯಲ್ಲಿ 1-1 ರಿಂದ ಸಮಬಲ ಸಾಧಿಸಿದ್ದಾರೆ. ಮೊದಲ ಗೇಮ್‌ನಲ್ಲಿ ಪ್ರಣಯ್ ಹಾಗೂ ಸುನೆಯಾಮ ಮಧ್ಯೆ ತೀವ್ರ ಪೈಪೋಟಿ ಕಂಡು ಬಂತು. ಮೊದಲ ಗೇಮ್‌ನ್ನು 21-17 ರಿಂದ ಜಯಿಸಿದ ಪ್ರಣಯ್ ಉತ್ತಮ ಆರಂಭ ಪಡೆದರು. ಎರಡನೇ ಗೇಮ್‌ನ ಆರಂಭದಲ್ಲಿ 4-0 ಮುನ್ನಡೆ ಪಡೆದ ಪ್ರಣಯ್ ಉತ್ತಮ ಆರಂಭ ಪಡೆದಿದ್ದರು. ಆ ಬಳಿಕ ತನ್ನ ಮುನ್ನಡೆಯನ್ನು 11-5ಕ್ಕೆ ವಿಸ್ತರಿಸಿದರು. ಆದರೆ ಆ ಬಳಿಕ ಪ್ರಣಯ್ ಅನಗತ್ಯ ತಪ್ಪೆಸಗಿದರು. ಇದರ ಲಾಭ ಪಡೆದ ಜಪಾನ್ ಆಟಗಾರ ಸತತ 8 ಅಂಕ ಸಂಪಾದಿಸಿ 14-11 ಮುನ್ನಡೆ ಸಾಧಿಸಿದರು. ಪ್ರಣಯ್ ಒಂದು ಹಂತದಲ್ಲಿ 14-14ರಿಂದ ಸಮಬಲ ಸಾಧಿಸಿದರೂ ಅಂತಿಮವಾಗಿ ಜಪಾನ್ ಆಟಗಾರ 2ನೇ ಗೇಮ್‌ನ್ನು 21-15 ಅಂತರದಿಂದ ಗೆದ್ದುಕೊಂಡರು. ನಿರ್ಣಾಯಕ ಗೇಮ್‌ನಲ್ಲಿ ಉಭಯ ಆಟಗಾರ ಮಧ್ಯೆ ತೀವ್ರ ಪೈಪೋಟಿ ಕಂಡುಬಂತು. ಒಂದು ಹಂತದಲ್ಲಿ 14-14 ರಿಂದ ಡ್ರಾ ಸಾಧಿಸಿದರು. ಕೊನೆಯಲ್ಲಿ ಜಪಾನ್ ಆಟಗಾರ ಪಂದ್ಯವನ್ನು 21-14 ಅಂತರದಿಂದ ವಶಪಡಿಸಿಕೊಂಡು ಗೆಲುವಿನ ನಗೆ ಬೀರಿದರು. ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಸುನೆಯಾಮ ಮೂರನೇ ಶ್ರೇಯಾಂಕದ ಹಾಗೂ ಜಕಾರ್ತ ಏಶ್ಯನ್ ಗೇಮ್ಸ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.