ನೀರಜ್ ಚೋಪ್ರಾ ಮೊಣಕೈಗೆ ಶಸ್ತ್ರಚಿಕಿತ್ಸೆ ದೋಹಾ ಚಾಂಪಿಯನ್‌ಶಿಪ್‌ಗೆ ಅಲಭ್ಯ?
ಮುಂಬೈ, ಮೇ 3: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ದೋಹಾದಲ್ಲಿ ಸೆಪ್ಟಂಬರ್ 27 ರಿಂದ ಅಕ್ಟೋಬರ್ 6ರ ತನಕ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ಕೋಕಿಲಾಬೆನ್ ಆಸ್ಪತ್ರೆಯ ಖ್ಯಾತ ಮೂಳೆ ಚಿಕಿತ್ಸೆ ತಜ್ಞ ಡಾ.ದಿನೇಶ್ ಶಾ ಅವರು ನೀರಜ್ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.
‘‘ನನಗೆ ಮುಂಬೈನಲ್ಲಿ ಮೊಣಕೈ ಶಸ್ತ್ರಚಿಕಿತ್ಸೆ ಆಗಿದೆ. ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ತಿಂಗಳ ಅಗತ್ಯವಿದೆ. ಆದಷ್ಟು ಬೇಗ ಕ್ರೀಡೆಗೆ ವಾಪಸಾಗುವೆ. ಪ್ರತಿಯೊಂದು ಹಿನ್ನಡೆಯು ಮುನ್ನಡೆಗೆ ಸಹಕಾರಿಯಾಗಲಿದೆ’’ ಎಂದು ನೀರಜ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
21ರ ಹರೆಯದ ಚೋಪ್ರಾಗೆ ಎಪ್ರಿಲ್‌ನಲ್ಲಿ ಪಾಟಿಯಾಲದ ಎನ್‌ಐಎಸ್‌ನಲ್ಲಿ ಫ್ರಾಕ್ಟೀಸ್ ನಡೆಸುವಾಗ ಮೊಣಕೈಗೆ ಗಾಯವಾಗಿತ್ತು. ಚೋಪ್ರಾ ಎಷ್ಟು ಸಮಯ ಕ್ರೀಡೆಯಿಂದ ದೂರ ಉಳಿಯುತ್ತಾರೆಂಬ ಕುರಿತು ಸ್ಪಷ್ಟವಾಗಿಲ್ಲ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾ ಭಾಗವಹಿಸುವುದು ಅನುಮಾನ. ಮುಂದಿನ ವರ್ಷ ಒಲಿಂಪಿಕ್ಸ್ ನಡೆಯುತ್ತಿರುವ ಕಾರಣ ಅವಸರ ಪಡದಂತೆ ಕೋಚ್ ಬಹದೂರ್ ಸಿಂಗ್ ಈಗಾಗಲೇ ಚೋಪ್ರಾಗೆ ಸಲಹೆ ನೀಡಿದ್ದಾರೆ.
ಮೊಣಕೈ ನೋವಿನಿಂದಾಗಿಯೇ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ಚೋಪ್ರಾ ದೋಹಾದಲ್ಲಿ ಎ.21ರಿಂದ 24ರ ತನಕ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಿಂದ ದೂರ ಉಳಿದಿದ್ದರು. 2016ರಲ್ಲಿ ಪೊಲೆಂಡ್‌ನಲ್ಲಿ ನಡೆದ ಐಎಎಎಫ್ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ನೀರಜ್ ಬೆಳಕಿಗೆ ಬಂದಿದ್ದರು. ಆ ನಂತರ ಹಿಂತಿದಿರುಗಿ ನೋಡದ ಅವರು 2016ರ ದಕ್ಷಿಣ ಏಶ್ಯ ಗೇಮ್ಸ್, 2017ರ ಏಶ್ಯನ್ ಚಾಂಪಿಯನ್‌ಶಿಪ್ ಹಾಗೂ ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು.