‘ಟಾಪ್ಸ್’ ಯೋಜನೆಗೆ ಆಟಗಾರರನ್ನು ಸೇರಿಸಲು ಮುಂದಾಗದ ಎಐಟಿಎ
ಹೊಸದಿಲ್ಲಿ, ಮೇ 3: ಏಶ್ಯನ್ ಗೇಮ್ಸ್‌ನ ಬಳಿಕ ಅಖಿಲ ಭಾರತ ಟೆನಿಸ್ ಒಕ್ಕೂಟ(ಎಐಟಿಎ)ವು ತನ್ನ ‘ಟಾಪ್ಸ್’ ಯೋಜನೆಗೆ ದೇಶದ ಅಗ್ರಮಾನ್ಯ ಟೆನಿಸ್ ಸಿಂಗಲ್ಸ್ ಆಟಗಾರರನ್ನು ಮರು ಸೇರ್ಪಡೆಗೊಳಿಸಲು ಮುಂದಾಗದ ಕಾರಣ ಆಟಗಾರರು ಟೆನಿಸ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆರ್ಥಿಕ ಅಡಚಣೆ ಎದುರಿಸು ವಂತಾಗಿದೆ. ಕ್ರೀಡಾ ಸಚಿವಾಲಯದ ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ’(ಟಾಪ್ಸ್) ಯೋಜನೆಯಡಿ ಈಗ ಹಲವು ಕ್ರೀಡಾ ವಿಭಾಗಗಳ 71 ಆಟಗಾರರು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಆದರೆ ಈಗ ದೇಶದ ಅಗ್ರಮಾನ್ಯ ಟೆನಿಸ್ ಡಬಲ್ಸ್ ಆಟಗಾರರಾಗಿರುವ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೊತೆಯಾಗಿ ಆಡದಿರುವ ಕಾರಣ ‘ಟಾಪ್ಸ್’ನಿಂದ ಇವರೂ ಹೊರಬೀಳುವ ಸಾಧ್ಯತೆಯಿದೆ.
ಟೋಕ್ಯೋ ಒಲಿಂಪಿಕ್ಸ್ ಅನ್ನು ಗಮನದಲ್ಲಿ ಟ್ಟುಕೊಂಡು ಈ ಇಬ್ಬರು ಆಟಗಾರರನ್ನು ‘ಟಾಪ್ಸ್’ಗೆ ಸೇರಿಸಲಾಗಿತ್ತು. ಆದರೆ ಜೊತೆಯಾಗಿ ಆಡಿದ ಪಂದ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾದ ಕಾರಣ ಇಬ್ಬರೂ ಪ್ರತ್ಯೇಕ ಜತೆಗಾರರನ್ನು ಆಯ್ಕೆ ಮಾಡಿಕೊಂಡು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ , ದೇಶದ ಅಗ್ರಮಾನ್ಯ ಸಿಂಗಲ್ಸ್ ಆಟಗಾರರಾದ ಪ್ರಜ್ಞೇಶ್ ಗುಣೇಶ್ವರನ್ ಹಾಗೂ ಅಂಕಿತಾ ರೈನಾ ಜಕಾರ್ತದಲ್ಲಿ ನಡೆದ ಏಶ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಬಳಿಕ ಇವರ ಹೆಸರನ್ನೂ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇವರನ್ನು ಮತ್ತೆ ‘ಟಾಪ್ಸ್’ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಎಐಟಿಎ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ. ಆದರೆ ಇದನ್ನು ನಿರಾಕರಿಸಿರುವ ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರಣ್ಮಯಿ ಚಟರ್ಜಿ, ‘‘ನಾವು ಹೆಸರನ್ನು ಸರಕಾರಕ್ಕೆ ರವಾನಿಸಿದ್ದೇವೆ. ಆದರೆ ಏಶ್ಯನ್ ಗೇಮ್ಸ್‌ನ ಬಳಿಕ ಸರಕಾರ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ. ಹೆಸರು ಸೇರ್ಪಡೆಗೊಳಿಸುವಂತೆ ಸರಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.
‘2018ರ ಏಶ್ಯನ್ ಗೇಮ್ಸ್‌ಗೂ ಮುನ್ನ ‘ಟಾಪ್ಸ್’ ಪಟ್ಟಿಯಲ್ಲಿ ಪ್ರಜ್ಞೇಶ್ ಗುಣೇಶ್ವರನ್, ರಾಮಕುಮಾರ್ ರಾಮನಾಥನ್, ಅಂಕಿತಾ, ಕಮ್ರಾನ್ ಕೌರ್ ಥಾಂಡಿ ಮತ್ತು ಪ್ರಾರ್ಥನಾ ಥೊಂಬರೆಯ ಹೆಸರಿತ್ತು. ಆದರೆ ಏಶ್ಯನ್ ಗೇಮ್ಸ್‌ನ ಬಳಿಕ ಬೋಪಣ್ಣ ಮತ್ತು ಶರಣ್ ಹೆಸರು ಮಾತ್ರ ಉಳಿದುಕೊಂಡಿದೆ. ನಾವು ಮರುಸೇರ್ಪಡೆಗೊಳಿಸಲು ಆಟಗಾರರ ಪಟ್ಟಿಯನ್ನು ರವಾನಿಸಿದ್ದರೂ, ‘ಟಾಪ್ಸ್’ ಸಮಿತಿಯು ತನ್ನ ಸಲಹಾಕಾರರ ಪರಿಶೀಲನೆಯಂತೆ ಕಾರ್ಯ ನಿರ್ವಹಿಸುತ್ತದೆ’’ ಎಂದು ಚಟರ್ಜಿ ಹೇಳಿದ್ದಾರೆ. ಬೋಪಣ್ಣ- ದಿವಿಜ್ ಶರಣ್ ಪ್ರತ್ಯೇಕವಾಗಿ ಆಡುತ್ತಿರುವ ಬಗ್ಗೆ ಬೋಪಣ್ಣರಿಂದ ವಿವರಣೆ ಕೇಳಿರುವುದಾಗಿ ಚಟರ್ಜಿ ತಿಳಿಸಿದ್ದಾರೆ.
‘ಟಾಪ್ಸ್’ ಸಮಿತಿ ಒಲಿಂಪಿಕ್ಸ್ ಕ್ರೀಡಾಕೂಟ ವನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಆಯ್ಕೆ ಮಾಡುತ್ತದೆ. ಆದರೆ ಆಯಾ ಕ್ರೀಡಾ ಒಕ್ಕೂಟಗಳೂ ತಮ್ಮ ಅತ್ಯುತ್ತಮ ಆಟಗಾರರನ್ನು ಶಿಫಾರಸು ಮಾಡಿದರೆ ಪರಿಗಣಿಸಲಾಗುತ್ತದೆ. ಕಳೆದ ಬಾರಿ ಅಂಕಿತಾರನ್ನು ರಾಷ್ಟ್ರೀಯ ವೀಕ್ಷಕರು ಕಡೆಗಣಿಸಿದ್ದರೂ ಎಐಟಿಎ ಶಿಫಾರಸಿನ ಮೇರೆಗೆ ಸೇರಿಸಿಕೊಳ್ಳಲಾಗಿದೆ ಎಂದು ‘ಟಾಪ್ಸ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಮಾಂಡರ್ ರಾಜೇಶ್ ರಾಜಗೋಪಾಲನ್ ಹೇಳಿದ್ದಾರೆ.