ಐಪಿಎಲ್‌ನಲ್ಲಿ ರಿಯಾನ್ ಪರಾಗ್ ಐತಿಹಾಸಿಕ ಸಾಧನೆ
ಹೊಸದಿಲ್ಲಿ, ಮೇ 4: ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟ್ಸ್ ಮನ್ ರಿಯಾನ್ ಪರಾಗ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಚೊಚ್ಚಲ ಅರ್ಧಶತಕವನ್ನು ಸಿಡಿಸುವುದರೊಂದಿಗೆ ಐಪಿಎಲ್ ಇತಿಹಾಸ ಪುಸ್ತಕಕ್ಕೆ ಸೇರ್ಪಡೆಯಾದರು. 49 ಎಸೆತಗಳಲ್ಲಿ 50 ರನ್ ಗಳಿಸಿದ ಪರಾಗ್ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 115 ರನ್ ಗಳಿಸಲು ನೆರವಾಗಿದ್ದಾರೆ. ರಾಜಸ್ಥಾನ ಪರ ಪರಾಗ್ ಸಹಿತ ಕೇವಲ ಮೂವರು ದಾಂಡಿಗರು ಎರಡಂಕೆಯ ಸ್ಕೋರ್ ಗಳಿಸಿದರು.
ಪರಾಗ್ ರಾಜಸ್ಥಾನದ ಪರ ಏಕಾಂಗಿ ಹೋರಾಟ(50 ರನ್, 49 ಎಸೆತ, 4 ಬೌಂಡರಿ, 2 ಸಿಕ್ಸರ್)ನೀಡಿ ಗಮನ ಸೆಳೆದರು. 17 ವರ್ಷ, 175 ದಿನಗಳ ಪ್ರಾಯದ ಪರಾಗ್ ಐಪಿಎಲ್‌ನಲ್ಲಿ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ. ಈ ಹಿಂದೆ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದರು.
ಪರಾಗ್ ಅವರು ಇಶಾಂತ್ ಶರ್ಮಾ ಎಸೆದ 17ನೇ ಓವರ್‌ನಲ್ಲಿ 18 ರನ್ ಗಳಿಸಿ ಮಿಂಚಿದರು. ಬೌಲ್ಟ್ ಎಸೆದ ಅಂತಿಮ ಓವರ್‌ನಲ್ಲಿ 2 ಸಿಕ್ಸರ್‌ಗಳನ್ನು ಸಿಡಿಸಿದರು.