ಟಿ-20 ಮುಂಬೈ ಲೀಗ್: 5 ಲಕ್ಷ ರೂ.ಗೆ ಹರಾಜಾದ ಅರ್ಜುನ್ ತೆಂಡುಲ್ಕರ್

Update: 2019-05-04 17:53 GMT

ಮುಂಬೈ, ಮೇ.4: ಎರಡನೇ ಆವೃತ್ತಿಯ ಟಿ-20 ಮುಂಬೈ ಲೀಗ್‌ಗಾಗಿ ಶನಿವಾರ ನಡೆದ ಬಿರುಸಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆಕಾಶ್ ಟೈಗರ್ಸ್ ಮುಂಬೈ ಪಶ್ಚಿಮ ಉಪನಗರ ತಂಡ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ರನ್ನು 5 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಉದಯೋನ್ಮುಖ ಎಡಗೈ ವೇಗಿ ಹಾಗೂ ಬ್ಯಾಟ್ಸ್‌ಮನ್ ಆಗಿರುವ, ಅಂಡರ್-19 ತಂಡದ ಪರ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿರುವ ಅರ್ಜುನ್ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದ ಕೆಲವೇ ಆಟಗಾರರ ಪೈಕಿ ಒಬ್ಬರಾಗಿದ್ದರು. ಆಲ್‌ರೌಂಡ್ ವಿಭಾಗದಲ್ಲಿ ಸೇರ್ಪಡೆಯಾಗಿದ್ದ ಅರ್ಜುನ್ ಮೂಲಬೆಲೆ 1 ಲಕ್ಷ ರೂ. ಆಗಿತ್ತು. ಹಲವು ತಂಡಗಳು ಅರ್ಜುನ್‌ರನ್ನು ಸೆಳೆಯಲು ಬಿಡ್ ಸಲ್ಲಿಸಿದ್ದವು. ನಾರ್ಥ್ ಮುಂಬೈ ಪ್ಯಾಂಥರ್ಸ್ ಗರಿಷ್ಠ ಬಿಡ್(5 ಲಕ್ಷ ರೂ.)ಸಲ್ಲಿಸಿತ್ತು. ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಚಾರು ಶರ್ಮಾ ಎರಡು ಹೊಸ ತಂಡಗಳಾದ ಆಕಾಶ್ ಟೈಗರ್ಸ್ ಹಾಗೂ ಈಗಲ್ ಥಾಣೆ ಸ್ಟ್ರೈಕರ್ಸ್‌ಗೆ ಒಟಿಎಂ (ಆಪರ್ಚುನಿಟಿ ಟು ಮ್ಯಾಚ್)ಆಯ್ಕೆ ನೀಡಿದರು. ಉಭಯ ತಂಡಗಳು 5 ಲಕ್ಷ ರೂ.ಗೆ ಒಟಿಎಂ ಆಯ್ಕೆ ಮಾಡಿದವು. ಎರಡು ಕಾರ್ಡ್‌ಗಳನ್ನು ಒಂದು ಬ್ಯಾಗ್‌ನಲ್ಲಿ ಹಾಕಲಾಯಿತು. ಮುಂಬೈ ಕ್ರಿಕೆಟ್ ಸಂಸ್ಥೆಯ ಆಡ್‌ಹಾಕ್ ಸಮಿತಿ ಸದಸ್ಯ ಉನ್ಮೇಶ್ ಖಾನ್‌ವಿಲ್ಕರ್ ಒಂದು ಕಾರ್ಡನ್ನು ಆಯ್ಕೆ ಮಾಡಿದರು. ಅದರಲ್ಲಿ ಆಕಾಶ್ ಟೈಗರ್ಸ್ ಹೆಸರಿತ್ತು.

ಹೀಗಾಗಿ ಜೂ.ತೆಂಡುಲ್ಕರ್ ಅವರು ಟೈಗರ್ಸ್ ತಂಡದ ಪಾಲಾದರು. ಹರಾಜಿಗೆ ಮೊದಲು ಆರು ಫ್ರಾಂಚೈಸಿಗಳು ಆಟಗಾರರಾದ ಸೂರ್ಯಕುಮಾರ ಯಾದವ್, ಆಕಾಶ್ ಪಾರ್ಕರ್(ಟ್ರಂಪ್‌ನೈಟ್ಸ್), ಶಿವಂ ದುಬೆ, ಸಿದ್ದೇಶ್ ಲಾಡ್(ಶಿವಾಜಿ ಪಾರ್ಕ್ ಲಯನ್ಸ್) ,ಪೃಥ್ವಿ ಶಾ(ನಾರ್ಥ್ ಮುಂಬೈ ಪ್ಯಾಂಥರ್ಸ್), ಜೈ ಬಿಶ್ತ್ ಹಾಗೂ ಧುರ್ಮಿಲ್ ಮಾಟ್ಕರ್(ಸೂಪರ್‌ಸೋನಿಕ್ಸ್), ಶುಭಂ ರಂಜನೆ, ತುಷಾರ್ ದೇಶಪಾಂಡೆ(ಅರ್ಕ್ಸ್ ಮುಂಬೈ), ಶ್ರೇಯಸ್ ಅಯ್ಯರ್, ಏಕನಾಥ ಕೇರ್ಕರ್(ನಮೋ ಬಾಂದ್ರಾ ಬ್ಲಾಸ್ಟರ್ಸ್)ರನ್ನು ತನ್ನಲ್ಲೇ ಉಳಿಸಿಕೊಂಡಿದ್ದವು. ಆದಿತ್ಯ ತಾರೆ, ಸರ್ಫರಾಝ್ ಅಹ್ಮದ್(ಈಗಲ್ ಥಾಣೆ), ಧವಳ್ ಕುಲಕರ್ಣಿ ಹಾಗೂ ಶಮ್ಸ್ ಮುಲಾನಿ(ಆಕಾಶ್ ಟೈಗರ್ಸ್)ರನ್ನು ಎರಡು ಹೊಸ ಫ್ರಾಂಚೈಸಿ ಪಾಲಾದರು. ಹರಾಜಿಗೆ ಮೊದಲು ಯಶಸ್ವಿ ಜೈಸ್ವಾಲ್ ಸಹಿತ 7 ಅಂಡರ್-19 ಆಟಗಾರರು ಲೀಗ್‌ಗೆ ಲಭ್ಯವಿರುವುದಿಲ್ಲ ಎಂದು ಘೋಷಿಸಲಾಯಿತು. ಲೀಗ್ ಮೇ 14 ರಿಂದ ವಾಂಖಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News