ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಬೆನ್ ಫೋಕ್ಸ್

Update: 2019-05-04 17:54 GMT

ಡುಬ್ಲಿನ್,ಮೇ 4: ಚೊಚ್ಚಲ ಪಂದ್ಯವನ್ನಾಡಿದ ಬೆನ್ ಫೋಕ್ಸ್ (ಔಟಾಗದೆ 61)ಸಾಹಸದಿಂದ ಅಗ್ರ ಸರದಿ ಕುಸಿತದಿಂದ ಚೇತರಿಸಿಕೊಂಡ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಏಕೈಕ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್‌ನ ನಂ.1 ತಂಡವಾಗಿರುವ ಇಂಗ್ಲೆಂಡ್ ಗೆಲ್ಲಲು 199 ರನ್ ಬೆನ್ನಟ್ಟುವ ವೇಳೆ 66 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಮೈದಾನದ ಹೊರಾಂಗಣ ಒದ್ದೆಯಿದ್ದ ಕಾರಣ ಪಂದ್ಯವನ್ನು 45 ಓವರ್‌ಗೆ ಕಡಿತಗೊಳಿಸಿದಾಗ ಆಂಗ್ಲರು ಮತ್ತಷ್ಟು ಒತ್ತಡಕ್ಕೆ ಸಿಲುಕಿದರು. ಆಗ ತಂಡಕ್ಕೆ ಆಸರೆಯಾದ ವಿಕೆಟ್‌ಕೀಪರ್ ಫೋಕ್ಸ್ (ಔಟಾಗದೆ 60, 76 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಟಾಮ್ ಕರನ್(ಔಟಾಗದೆ 47,56 ಎಸೆತ, 5 ಬೌಂಡರಿ)7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಮೂರು ಓವರ್ ಬಾಕಿ ಇರುವಾಗಲೇ ಪ್ರವಾಸಿ ತಂಡಕ್ಕೆ ಗೆಲುವು ತಂದರು. ಐರ್ಲೆಂಡ್ ಬೌಲರ್ ಲಿಟ್ಲ್(4-45) ಇಂಗ್ಲೆಂಡ್ ದಾಂಡಿಗರ ಎದೆ ನಡುಗಿಸಿದರು.

ಫೋಕ್ಸ್ 37 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಹಿರಿಯ ವೇಗದ ಬೌಲರ್ ಟಿಮ್ ಮುರ್ಟಘ್ ಅವರ ಎಲ್‌ಬಿಡಬ್ಲು ಮನವಿಯಿಂದ ಫೋಕ್ಸ್ ಪಾರಾದರು. ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ಇಬ್ಬರು ಹಿರಿಯ ಆಟಗಾರರಾದ ಜೇಸನ್ ರಾಯ್ ಹಾಗೂ ಅಲೆಕ್ಸ್ ಹೇಲ್ಸ್ ಅನುಪಸ್ಥಿತಿಯಲ್ಲಿ ಆಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡ ಲಿಯಾಮ್ ಪ್ಲಂಕೆಟ್(4-35)ಹಾಗೂ ಕರನ್(3-35) ದಾಳಿಗೆ ಸಿಲುಕಿ 43.1 ಓವರ್‌ಗಳಲ್ಲಿ 198 ರನ್‌ಗೆ ಸರ್ವಪತನವಾಯಿತು. ಐರ್ಲೆಂಡ್ ಪರ ಸ್ಟರ್ಲಿಂಗ್ ಸರ್ವಾಧಿಕ(33) ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News