ಪುಣ್ಯತಿಥಿಯಂದು ಟಿಪ್ಪು ಸುಲ್ತಾನ್‌ಗೆ ಇಮ್ರಾನ್ ಖಾನ್ ಶ್ರದ್ಧಾಂಜಲಿ

Update: 2019-05-05 17:43 GMT

ಇಸ್ಲಾಮಾಬಾದ್, ಮೇ 5: 18ನೇ ಶತಮಾನದ ಮೈಸೂರು ರಾಜ ಟಿಪ್ಪು ಸುಲ್ತಾನ್‌ರ ಪುಣ್ಯತಿಥಿಯ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘‘ಗುಲಾಮಗಿರಿಯ ಜೀವನ ನಡೆಸುವುದಕ್ಕಿಂತ’’ ಸ್ವಾತಂತ್ರಕ್ಕಾಗಿ ಸಾಯುವುದನ್ನು ‘ಮೈಸೂರಿನ ಹುಲಿ’ ಆಯ್ಕೆ ಮಾಡಿಕೊಂಡರು ಎಂದು ಇಮ್ರಾನ್ ಬಣ್ಣಿಸಿದ್ದಾರೆ.

‘‘ಇಂದು, ಮೇ 4 ಟಿಪ್ಪು ಸುಲ್ತಾನರ ಪುಣ್ಯತಿಥಿ. ನಾನು ಅವರನ್ನು ಯಾಕೆ ಇಷ್ಟಪಡುತ್ತೇನೆಂದರೆ, ಅವರು ಗುಲಾಮಗಿರಿಯ ಜೀವನ ನಡೆಸುವ ಬದಲು ಸ್ವಾತಂತ್ರವನ್ನು ಬಯಸಿದರು ಹಾಗೂ ಅದಕ್ಕಾಗಿ ಹೋರಾಡುತ್ತಾ ಪ್ರಾಣ ಕಳೆದುಕೊಂಡರು’’ ಎಂಬುದಾಗಿ ಇಮ್ರಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಪಾಕ್ ಪ್ರಧಾನಿ ಟಿಪ್ಪು ಸುಲ್ತಾನರ ಶೌರ್ಯವನ್ನು ಕೊಂಡಾಡುವುದು ಇದೇ ಮೊದಲೇನಲ್ಲ. ಫೆಬ್ರವರಿಯಲ್ಲಿ, ಪುಲ್ವಾಮ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಏರ್ಪಡಿಸಿದ ಸಂಸತ್ತಿನ ಜಂಟಿ ಅಧಿವೇಶನದಲ್ಲೂ  ಟಿಪ್ಪು ಸುಲ್ತಾನರ ಶೌರ್ಯವನ್ನು ಶ್ಲಾಘಿಸಿದ್ದರು.

ನಾಲ್ಕನೇ ಆಂಗ್ಲೋ-ಮೈಸೂರು ಕದನದಲ್ಲಿ ಟಿಪ್ಪು ಸುಲ್ತಾನ್ ವೀರಾವೇಶದಿಂದ ಹೋರಾಡಿದರು. ಆದರೆ ಶ್ರೀರಂಗಪಟ್ಟಣಕ್ಕೆ ಬ್ರಿಟಿಶರು ಹಾಕಿದ ಮುತ್ತಿಗೆಯ ವೇಳೆ ಕೊಲ್ಲಲ್ಪಟ್ಟರು. ಅದಕ್ಕೂ ಮೊದಲು, ರಹಸ್ಯ ಮಾರ್ಗಗಳ ಮೂಲಕ ತಪ್ಪಿಸಿಕೊಳ್ಳುವಂತೆ ಅವರ ಫ್ರೆಂಚ್ ಸೇನಾ ಸಲಹೆಗಾರರು ಸೂಚಿಸಿದ್ದರು. ಆದರೆ, ಅಂದು ಅವರು ಹೇಳಿದ ಮಾತು ಇಂದು ಪ್ರಸಿದ್ಧವಾಗಿದೆ. ‘‘ಕುರಿಯಾಗಿ ಸಾವಿರ ವರ್ಷಗಳ ಕಾಲ ಬದುಕುವುದಕ್ಕಿಂತ ಹುಲಿಯಾಗಿ ಒಂದು ದಿನ ಬದುಕುವುದು ಮೇಲು’’ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News