34 ವರ್ಷಗಳ ಬಳಿಕ ಹಾಲಿವುಡ್ ನಿರ್ದೇಶಕನ ಹತ್ಯೆ ಆರೋಪಿ ಬಂಧನ

Update: 2019-05-11 16:41 GMT

ಲಾಸ್ ಏಂಜಲಿಸ್, ಮೇ 11: ಮೂರು ದಶಕಗಳಿಗೂ ಅಧಿಕ ಕಾಲ ಬಗೆಹರಿಯದೇ ಉಳಿದಿದ್ದ ಪ್ರಸಿದ್ಧ ಹಾಲಿವುಡ್ ಟೆಲಿವಿಶನ್ ಧಾರಾವಾಹಿಗಳ ನಿರ್ದೇಶಕ ಹಾಗೂ ವಿಶ್ವದರ್ಜೆಯ ಬ್ರಿಜ್ (ಇಸ್ಪೀಟ್ ಎಲೆಗಳಿಂದ ಆಡುವ ಒಂದು ಮಾದರಿಯ ಆಟ) ಆಟಗಾರ ಬಾರಿ ಕ್ರೇನ್ ಕೊಲೆಯ ರಹಸ್ಯವನ್ನು ಬಿಡಿಸಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಶುಕ್ರವಾರ ಹೇಳಿದ್ದಾರೆ.

1985ರಲ್ಲಿ ಲಾಸ್ ಏಂಜಲಿಸ್‌ನ ತನ್ನ ಮನೆಯಲ್ಲಿ ಕೊಲೆಯಾಗಿದ್ದ ಬಾರಿ ಕ್ರೇನ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾರ್ತ್ ಕರೋಲಿನದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಾರಿ ಕ್ರೇನ್‌ರನ್ನು ತಲೆಗೆ ಹೊಡೆದು ಹಾಗೂ ಉಸಿರುಗಟ್ಟಿಸಿ ಕೊಲ್ಲಲಾಗಿತ್ತು.

1960, 70 ಮತ್ತು 80ರ ದಶಕಗಳಲ್ಲಿ ಬಾರಿ ಕ್ರೇನ್ ಸಕ್ರಿಯರಾಗಿದ್ದರು. ಈ ಅವಧಿಯಲ್ಲಿ ಅವರು ‘ಡಲ್ಲಾಸ್’, ‘ಮಿಶನ್: ಇಂಪಾಸಿಬಲ್’ ಮತ್ತು ‘ಹವಾಯಿ ಫೈವ್-ಒ’ ಮುಂತಾದ ಪ್ರಸಿದ್ಧ ಧಾರಾವಾಹಿಗಳನ್ನು ನಿರ್ಮಿಸಿದ್ದರು.

ಶಂಕಿತನನ್ನು ನಾರ್ತ್ ಕರೋಲಿನದ 52 ವರ್ಷದ ಎಡ್ವರ್ಡ್ ಹಯಾಟ್ ಎಂಬುದಾಗಿ ಗುರುತಿಸಲಾಗಿದೆ. ಕಳೆದ ವರ್ಷ ಡಿಎನ್‌ಎ ಸಾಕ್ಷ್ಯವನ್ನು ಮರು ಪರೀಕ್ಷೆ ನಡೆಸಿದಾಗ ಅಪರಾಧ ಸ್ಥಳದಲ್ಲಿ ಹಯಾಟ್ ಇರುವುದು ಸಾಬೀತಾಗಿದೆ ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘2019 ಮಾರ್ಚ್ 8ರಂದು, ಪತ್ತೆದಾರರು ನಾರ್ತ್ ಕರೋಲಿನಕ್ಕೆ ಪ್ರಯಾಣಿಸಿ ಹಯಾಟ್‌ನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ವೇಳೆ, ಬಾರಿ ಕ್ರೆನ್‌ರನ್ನು ಕೊಂದಿರುವುದನ್ನು ಅವನು ಒಪ್ಪಿಕೊಂಡನು’’ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News