ಮ್ಯಾನ್ಮಾರ್ ಪತ್ರಕರ್ತರ ಬಿಡುಗಡೆಗೆ ತಡೆಯಾಗಿದ್ದು ಸೇನೆಯಲ್ಲ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ!

Update: 2019-05-11 17:29 GMT

ಬ್ಯಾಂಕಾಕ್, ಮೇ 11: ಮ್ಯಾನ್ಮಾರ್‌ನಲ್ಲಿ ಜೈಲಿನಲ್ಲಿದ್ದ ಇಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಪತ್ರಕರ್ತರ ಬಿಡುಗಡೆಯ ದಾರಿಯಲ್ಲಿದ್ದ ಅತಿ ದೊಡ್ಡ ತಡೆ ದೇಶದ ಸೇನೆಯಾಗಿರಲಿಲ್ಲ; ಬದಲಿಗೆ ನಾಗರಿಕ ಸರಕಾರದ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿ ಆಗಿದ್ದರು ಎಂಬುದಾಗಿ ರಾಜತಾಂತ್ರಿಕರು ಹೇಳಿದ್ದಾರೆ.

ಒಂದು ಕಾಲದಲ್ಲಿ ಸ್ವತಃ ರಾಜಕೀಯ ಕೈದಿಯಾಗಿದ್ದ ಸೂ ಕಿ, ಒಮ್ಮೆ ಈ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಈ ರೀತಿಯಾಗಿ ಮನವಿ ಮಾಡಿದ್ದರು: ‘‘ನಮ್ಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದಕ್ಕಾಗಿ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಿ’’.

ಪತ್ರಕರ್ತರಾದ ವಾ ಲೋನ್ ಮತ್ತು ಕ್ಯಾವ್ ಸೋ ಊ ಅವರ ಬಿಡುಗಡೆಗೆ ಸೂನ್ ಕಿಯ ವಿರೋಧ ರಾಜತಾಂತ್ರಿಕ ವಲಯದಲ್ಲಿ ಜನಜನಿತವಾಗಿತ್ತು. ಈ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ರಾಜತಾಂತ್ರಿಕರು ಪದೇ ಪದೇ ಅವರಿಗೆ ಮನವಿ ಮಾಡುತ್ತಿದ್ದರು.

ಕೊನೆಗೂ, 500 ದಿನಗಳಿಗೂ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದ ಬಳಿಕ ಈ ವಾರ ಇಬ್ಬರು ಪತ್ರಕರ್ತರು ಅಧ್ಯಕ್ಷರ ಕ್ಷಮಾದಾನದಡಿ ಬಿಡುಗಡೆಯಾಗಿರುವುದನ್ನು ಸ್ಮರಿಸಬಹುದಾಗಿದೆ. ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಹತ್ಯಾಕಾಂಡವನ್ನು ವರದಿ ಮಾಡಿರುವುದಕ್ಕಾಗಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿತ್ತು.

ಹಲವು ಸಂದರ್ಭಗಳಲ್ಲಿ, ವಿದೇಶಿ ರಾಜತಾಂತ್ರಿಕರು ಪತ್ರಕರ್ತರ ಬಿಡುಗಡೆಯ ವಿಷಯವನ್ನು ಪ್ರಸ್ತಾಪಿಸಿದಾಗಲೆಲ್ಲ ಸೂ ಕಿ ಕೋಪಗೊಳ್ಳುತ್ತಿದ್ದರು.

ಪತ್ರಕರ್ತರ ಬಗ್ಗೆ ನ್ಯಾಯಾಲಯ ತೀರ್ಪು ನೀಡುವ ಮೊದಲೇ, ಜಪಾನ್ ಟೆಲಿವಿಶನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂಬುದಾಗಿ ಘೋಷಿಸಿದ್ದರು.

ಪತ್ರಕರ್ತರಿಗೆ ನ್ಯಾಯಾಲಯವು ಶಿಕ್ಷೆ ಘೋಷಿಸಿದ ಬಳಿಕ, ಪೊಲೀಸರು ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿರುವುದಕ್ಕೆ ಸ್ಪಷ್ಟ ಪುರಾವೆಯಿದ್ದ ಹೊರತಾಗಿಯೂ, ನಾನು ಮಧ್ಯಪ್ರವೇಶಿಸುವ ಮುನ್ನ ಅವರು ತಮ್ಮ ಎಲ್ಲ ಮೇಲ್ಮನವಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News