ಐಪಿಎಲ್ ಪ್ರಶಸ್ತಿ ವಿಜೇತ ಪಟ್ಟಿ: ಗಿಲ್ ಉದಯೋನ್ಮುಖ ಆಟಗಾರ, ಬುಮ್ರಾ ಪಂದ್ಯಶ್ರೇಷ್ಠ

Update: 2019-05-13 05:55 GMT

ಹೈದರಾಬಾದ್,ಮೇ 13: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 1 ರನ್‌ನಿಂದ ರೋಚಕ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ 51 ದಿನಗಳ ಕಾಲ ನಡೆದ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ದಾಖಲೆ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸುವ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿತು. ಈ ವರ್ಷದ ಐಪಿಎಲ್‌ನಲ್ಲಿ 4ನೇ ಬಾರಿ ಚೆನ್ನೈಯನ್ನು ಮಣಿಸಿದ ಮುಂಬೈ ಪ್ರಶಸ್ತಿಗೆ ಮುತ್ತಿಟ್ಟಿತು. ಮುಂಬೈ ಈ ಹಿಂದೆ 2013. 2015 ಹಾಗೂ 2017ರಲ್ಲಿ ಪ್ರಶಸ್ತಿ ಜಯಿಸಿತ್ತು.

ಪಂದ್ಯಶ್ರೇಷ್ಠ: ಜಸ್‌ಪ್ರಿತ್ ಬುಮ್ರಾ

 ಚೆನ್ನೈ ವಿರುದ್ಧ 14 ರನ್‌ಗೆ 2 ವಿಕೆಟ್ ಪಡೆದಿರುವ ಜಸ್‌ಪ್ರಿತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ವರ್ಷದ ಉದಯೋನ್ಮುಖ ಆಟಗಾರ: ಶುಭಮನ್ ಗಿಲ್

ಅಗ್ರ ಕ್ರಮಾಂಕದಲ್ಲಿ 124.30ರ ಸ್ಟ್ರೈಕ್‌ರೇಟ್‌ನಲ್ಲಿ 3 ಅರ್ಧಶತಕಗಳನ್ನು ಸಿಡಿಸಿರುವ 19ರ ಹರೆಯದ ಶುಭಮನ್ ಗಿಲ್ ವರ್ಷದ ಉದಯೋನ್ಮುಖ ಪ್ರಶಸ್ತಿಗೆ ಭಾಜನರಾಗಿದ್ದಾರೆ. 10 ಲಕ್ಷ ರೂ. ಬಹುಮಾನ ಜೇಬಿಗಿಳಿಸಿದ್ದಾರೆ.

ವರ್ಷದ ಪರಿಪೂರ್ಣ ಕ್ಯಾಚ್ ಪಡೆದ ಆಟಗಾರ: ಕಿರೊನ್ ಪೊಲಾರ್ಡ್

ಮುಂಬೈ ತಂಡದ ಆಲ್‌ರೌಂಡರ್ ಕಿರೊನ್ ಪೊಲಾರ್ಡ್ ವರ್ಷದ ಪರಿಪೂರ್ಣ ಕ್ಯಾಚ್ ಪಡೆದ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಲೀಗ್ ಹಂತದಲ್ಲಿ ಸುರೇಶ್ ರೈನಾ ನೀಡಿದ ಕ್ಯಾಚ್‌ನ್ನು ಪಡೆದು ಗಮನ ಸೆಳೆದಿದ್ದರು. ಪೊಲಾರ್ಡ್ 1 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

ವರ್ಷದ ಕಲಾತ್ಮಕ ಆಟಗಾರ: ಕೆ.ಎಲ್.ರಾಹುಲ್

ಕೆ.ಎಲ್.ರಾಹುಲ್ ವರ್ಷದ ಅತ್ಯಂತ ಕಲಾತ್ಮಕ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ತನ್ನ ಸ್ನೇಹಿತ ಹಾರ್ದಿಕ್ ಪಾಂಡ್ಯರಿಂಧ ಪ್ರಶಸ್ತಿ ಸ್ವೀಕರಿಸಿದರು.

ಪರ್ಪಲ್ ಕ್ಯಾಪ್: ಇಮ್ರಾನ್ ತಾಹಿರ್(26 ವಿಕೆಟ್)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ವರ್ಷದ ಐಪಿಎಲ್‌ನಲ್ಲಿ ಒಟ್ಟು 26 ವಿಕೆಟ್‌ಗಳನ್ನು ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದವರಿಗೆ ನೀಡಲಾಗುವ ಪರ್ಪಲ್ ಕ್ಯಾಪ್‌ನ್ನು ತನ್ನದಾಗಿಸಿಕೊಂಡರು. ಮುಂಬೈ ವಿರುದ್ಧ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯ ಕುಮಾರ ಯಾದವ್ ವಿಕೆಟನ್ನು ಪಡೆದ ತಾಹಿರ್ ದ.ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡರನ್ನು ಹಿಂದಿಕ್ಕಿ ಟೂರ್ನಿಯ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರು.

ಆರಂಜ್ ಕ್ಯಾಪ್: ಡೇವಿಡ್ ವಾರ್ನರ್(692 ರನ್)

ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಗ್ರ ಕ್ರಮಾಂಕದ ದಾಂಡಿಗ ಡೇವಿಡ್ ವಾರ್ನರ್ ಟೂರ್ನಿಯಲ್ಲಿ ಸರ್ವಾಧಿಕ ರನ್ ಗಳಿಸಿದ ಆಟಗಾರನಿಗೆ ಸಲ್ಲುವ ಆರಂಜ್ ಕ್ಯಾಪ್‌ನ್ನು ಧರಿಸಿದ್ದಾರೆ. ವಾರ್ನರ್ ಈ ಋತುವಿನ ಐಪಿಎಲ್‌ನ 12 ಪಂದ್ಯಗಳಲ್ಲಿ 9 ಫಿಫ್ಟಿ ಪ್ಲಸ್ ಸಹಿತ ಒಟ್ಟು 692 ರನ್ ಗಳಿಸಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದರು. ವಿಶ್ವಕಪ್‌ಗೆ ತಯಾರಿ ನಡೆಸಲು ಐಪಿಎಲ್‌ನ ಕೊನೆಯ ಪಂದ್ಯಗಳಲ್ಲಿ ಆಡದೇ ಆಸ್ಟ್ರೇಲಿಯಕ್ಕೆ ವಾಪಸಾದ ಹೊರತಾಗಿಯೂ ವಾರ್ನರ್ ಗರಿಷ್ಠ ಸ್ಕೋರರ್ ಪಟ್ಟ ಉಳಿಸಿಕೊಂಡಿದ್ದಾರೆ. ಪಂಜಾಬ್ ಆಟಗಾರ ಕೆಎಲ್ ರಾಹುಲ್ 14 ಪಂದ್ಯಗಳಲ್ಲಿ 593 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಅತ್ಯಂತ ಮೌಲ್ಯಯುತ ಆಟಗಾರ: ಆ್ಯಂಡ್ರೆ ರಸೆಲ್(510 ರನ್, 11 ವಿಕೆಟ್)

 ಕೆಕೆಆರ್‌ನ್ನು ಪ್ರತಿನಿಧಿಸಿರುವ ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅತ್ಯಂತ ವೌಲ್ಯಯುತ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಭಮನ್ ಗಿಲ್‌ರಿಂದ 1 ಲಕ್ಷ ರೂ. ಬಹುಮಾನ ಸ್ವೀಕರಿಸಿದ್ದಾರೆ.

ವರ್ಷದ ಸೂಪರ್ ಸ್ಟ್ರೈಕರ್: ಆ್ಯಂಡ್ರೆ ರಸೆಲ್

ಕೆಕೆಆರ್ ಪರ 204.81 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ನ ಮೂಲಕ ಆ್ಯಂಡ್ರೆ ರಸೆಲ್ ವರ್ಷದ ಸೂಪರ್ ಸ್ಟ್ರೈಕರ್‌ಗೆ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಾಧನೆಗೆ ಒಂದು ಲಕ್ಷ ರೂ. ಜೊತೆಗೆ ಕಾರೊಂದನ್ನು ಉಡುಗೊರೆಯಾಗಿ ಪಡೆದರು.

ಫೈಯರ್ ಪ್ಲೇ ಅವಾರ್ಡ್: ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ವರ್ಷದ ಫೈಯರ್ ಪ್ಲೇ ಅವಾರ್ಡ್ ಪಡೆಯಿತು. ವಿವಿಎಸ್ ಲಕ್ಷ್ಮಣ್ ಟ್ರೋಫಿಯನ್ನು ಸ್ವೀಕರಿಸಿದರು. ಈ ವಿಭಾಗಕ್ಕೆ ಯಾವುದೇ ನಗದು ಬಹುಮಾನವಿಲ್ಲ.

ಪಿಚ್ ಹಾಗೂ ಗ್ರೌಂಡ್ ಅವಾರ್ಡ್: ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಬಿ) ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಪಿಚ್ ಹಾಗೂ ಗ್ರೌಂಡ್ ಅವಾರ್ಡ್ ಪಡೆದವು.

ವರ್ಷದ ಗೇಮ್ ಚೇಂಜರ್: ರಾಹುಲ್ ಚಹಾರ್(ಮುಂಬೈ ಇಂಡಿಯನ್ಸ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News