ವಿಜಯ್ ಮಲ್ಯ ಗಡಿಪಾರು ವಿವರ ನೀಡಲು ವಿದೇಶಾಂಗ ಸಚಿವಾಲಯ ನಿರಾಕರಣೆ

Update: 2019-05-15 17:39 GMT

ಹೊಸದಿಲ್ಲಿ,ಮೇ.15: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಮತ್ತು ನೀರವ್ ಮೋದಿಯ ಗಡಿಪಾರಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ.

ತಪ್ಪಿತಸ್ಥರ ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸಬಹುದಾದ ಮಾಹಿತಿಗಳನ್ನು ಬಹಿರಂಗಪಡಿಸುವುದನ್ನು ಮಾಹಿತಿ ಹಕ್ಕು ಕಾಯ್ದೆಯ ನಿಬಂಧನೆ ನಿರ್ಬಂಧಿಸುತ್ತದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, ಮಲ್ಯ ಮತ್ತು ಮೋದಿಯ ಗಡಿಪಾರು ಮನವಿಯನ್ನು ಬ್ರಿಟನ್ ಸರಕಾರಕ್ಕೆ ಕಳುಹಿಸಲಾಗಿದೆ ಮತ್ತು ಅಲ್ಲಿನ ಸರಕಾರ ಈ ಮನವಿಗಳನ್ನು ಪರಿಶೀಲಿಸುತ್ತಿದೆ. ಈ ಮನವಿಗೆ ಸಂಬಂಧಿಸಿದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)(ಎಚ್) ಅಡಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

9,000 ಕೋಟಿ ರೂ. ಹಣ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಸದ್ಯ ಬ್ರಿಟನ್‌ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಅವರನ್ನು ಗಡಿಪಾರು ಮಾಡುವಂತೆ ಕೋರಿ ಭಾರತ ಮಾಡಿದ ಮನವಿಯನ್ನು ಬ್ರಿಟನ್ ಗೃಹ ಕಾರ್ಯದರ್ಶಿ ಫೆಬ್ರವರಿಯಲ್ಲಿ ಅಂಗೀಕರಿಸಿದ್ದರು. ತನ್ನ ಗಡಿಪಾರು ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಜುಲೈ 2ರಂದು ನಡೆಯಲಿದೆ. ಇನ್ನು ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯೂ ಲಂಡನ್‌ನಲ್ಲಿ ತನ್ನ ಗಡಿಪಾರು ಪ್ರಕ್ರಿಯೆಯ ವಿರುದ್ಧ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News