ಕೆರಿಬಿಯನ್ ಪ್ರೀಮಿಯರ್ ಲೀಗ್: ಇತಿಹಾಸ ನಿರ್ಮಿಸಿದ ಇರ್ಫಾನ್ ಪಠಾಣ್

Update: 2019-05-16 14:53 GMT

ಹೊಸದಿಲ್ಲಿ, ಮೇ 16: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆಟಗಾರರ ಪ್ರಾಥಮಿಕ ಪಟ್ಟಿಯಲ್ಲಿ ಭಾರತದ ಆಲ್‌ ರೌಂಡರ್ ಇರ್ಫಾನ್ ಪಠಾಣ್ ಸ್ಥಾನ ಗಿಟ್ಟಿಸಿಕೊಂಡಿದ್ದು, ಸಿಪಿಎಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಒಂದು ವೇಳೆ 34ರ ಹರೆಯದ ಪಠಾಣ್ ಆಟಗಾರರ ಹರಾಜಿನಲ್ಲಿ ಫ್ರಾಂಚೈಸಿಗಳಿಂದ ಆಯ್ಕೆಯಾದರೆ ಪ್ರಮುಖ ವಿದೇಶಿ ಟ್ವೆಂಟಿ-20 ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಬಿಸಿಸಿಐ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟಿಗರು ವಿದೇಶದ ಪ್ರಮುಖ ಟಿ-20 ಲೀಗ್‌ಗಳಾದ ಬಿಬಿಎಲ್, ಸಿಪಿಎಲ್, ಬಿಪಿಎಲ್, ರ್ಯಾಮ್‌ಸ್ಲಾಮ್ ಟಿ-20ಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಿ ಕಠಿಣ ನಿಲುವು ತಾಳಿತ್ತು. ಇದೀಗ ಈ ವರ್ಷದ ಸಿಪಿಎಲ್‌ ನ ಪ್ರಾಥಮಿಕ ಪಟ್ಟಿಯಲ್ಲಿ ಪಠಾಣ್ ಸೇರ್ಪಡೆಯಾಗುವುದರೊಂದಿಗೆ ಬಿಸಿಸಿಐ ತನ್ನ ಪಟ್ಟು ಸಡಿಲಿಸುವ ಲಕ್ಷಣ ಕಂಡುಬಂದಿದೆ.

ಇರ್ಫಾನ್‌ ಗೆ ನಿರಾಪೇಕ್ಷಣಾ ಪತ್ರ (ಎನ್‌ಒಸಿ)ನೀಡಲಾಗಿದೆಯೇ ಎಂಬ ಕುರಿತು ಬಿಸಿಸಿಐ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 ಇರ್ಫಾನ್ ಕಳೆದ 2 ವರ್ಷಗಳಿಂದ ಐಪಿಎಲ್‌ ನಲ್ಲಿ ಭಾಗವಹಿಸಿಲ್ಲ. ಈ ವರ್ಷದ ಐಪಿಎಲ್‌ ನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದ್ದರು. ಕಳೆದ ಋತುವಿನಲ್ಲಿ ಬರೋಡಾ ತಂಡವನ್ನು ತ್ಯಜಿಸಿದ್ದ ಪಠಾಣ್ ಜಮ್ಮು-ಕಾಶ್ಮೀರದ ಆಟಗಾರ ಹಾಗೂ ಸಲಹೆಗಾರನಾಗಿ ಸೇರ್ಪಡೆಯಾಗಿದ್ದರು. ಇರ್ಫಾನ್ ಭಾರತದ ಪರ 29 ಟೆಸ್ಟ್, 120 ಏಕದಿನ ಹಾಗೂ 24 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಅಂತರ್‌ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 301 ವಿಕೆಟ್‌ಗಳನ್ನು ಉರುಳಿಸಿದ್ದಾರೆ, 2,800 ರನ್ ಕಲೆ ಹಾಕಿದ್ದಾರೆ.

ಈ ವರ್ಷದ ಸಿಪಿಎಲ್‌ ಗೆ 20 ವಿದೇಶಿ ರಾಷ್ಟ್ರಗಳ ಹಾಗೂ ವೆಸ್ಟ್ ಇಂಡೀಸ್‌ ನ 536 ಆಟಗಾರರು ಆಯ್ಕೆಗೆ ಲಭ್ಯವಿದ್ದು, ಆಟಗಾರರ ಪಟ್ಟಿಯನ್ನು ಆಯಾ ತಂಡಗಳಿಗೆ ಕಳುಹಿಸಲಾಗಿದೆ. ಲಂಡನ್‌ನಲ್ಲಿ ಮೇ 22 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News