ಮಲಿನ ಸಿರಿಂಜ್ ಬಳಸಿದ ವೈದ್ಯ: 400ಕ್ಕೂ ಅಧಿಕ ಜನರಿಗೆ ಎಚ್ ಐವಿ ಸೋಂಕು

Update: 2019-05-17 17:54 GMT

ಇಸ್ಲಾಮಾಬಾದ್, ಮೇ 17: ಪಾಕಿಸ್ತಾನದಲ್ಲಿ ವೈದ್ಯನೊಬ್ಬ ಮಲಿನ ಸಿರಿಂಜ್‌ಗಳನ್ನು ಬಳಸಿ 400ಕ್ಕೂ ಅಧಿಕ ಜನರಿಗೆ ಎಚ್‌ಐವಿ ಸೋಂಕು ಹರಡಿದ್ದಾನೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ಸಂತ್ರಸ್ತರು ಮಕ್ಕಳೇ ಆಗಿರುವುದು ಹೆತ್ತವರಲ್ಲಿ ಕಳವಳ ಮೂಡಿಸಿದೆ.

ಅದೇ ವೇಳೆ, ನಕಲಿ ವೈದ್ಯರು ಮಲಿನ ಉಪಕರಣಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಚ್‌ಐವಿ ಸೋಂಕಿಗೆ ಒಳಗಾಗುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂಬುದಾಗಿ ಪರಿಣತರು ಎಚ್ಚರಿಸಿದ್ದಾರೆ.

ದಕ್ಷಿಣ ಪಾಕಿಸ್ತಾನದ ಸಿಂಧ್ ಪ್ರಾಂತದ ಲರ್ಕಾನದ ಹೊರವಲಯದಲ್ಲಿರುವ ವಸಯೊ ಎಂಬ ಗ್ರಾಮದಲ್ಲಿ ಎಚ್‌ಐವಿ ಸೋಂಕು ಪೀಡಿತ ಸಂತ್ರಸ್ತರಿಗಾಗಿ ಕಳೆದ ತಿಂಗಳು ಐದು ತಪಾಸಣಾ ಕೋಣೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಂತ್ರಸ್ತ ಮಕ್ಕಳ ಹೆತ್ತವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಈ ಬಡ ಗ್ರಾಮದಲ್ಲಿ ಜನರಲ್ಲಿ ಕೋಪ ಮತ್ತು ಭಯ ಮಡುಗಟ್ಟಿದೆ. ಎಚ್‌ಐವಿ ಸೋಂಕು ಪ್ರಕರಣಗಳು ಸ್ಥಳೀಯ ಶಿಶು ವೈದ್ಯನ ಸಾರಾಸಗಟು ಅಜಾಗರೂಕತೆಯಿಂದ ಸಂಭವಿಸಿರಬಹುದು ಅಥವಾ ಇದರ ಹಿಂದೆ ದುರುದ್ದೇಶವೂ ಇರಬಹುದು ಎಂಬ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ತಮ್ಮ ಮಕ್ಕಳ ಭವಿಷ್ಯವನ್ನೇ ಈ ವೈದ್ಯ ಕಿತ್ತುಕೊಂಡ ಎಂಬುದಾಗಿ ಈ ಬಡಗ್ರಾಮದ ಜನರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News