ಗ್ರೀನ್ ಕಾರ್ಡ್ ಬದಲು ‘ಬಿಲ್ಡ್ ಅಮೆರಿಕ’ ವೀಸಾ

Update: 2019-05-17 18:23 GMT

ವಾಶಿಂಗ್ಟನ್, ಮೇ 17: ಅರ್ಹತೆ ಮತ್ತು ಅಂಕಗಳ ಆಧಾರಿತ ನೂತನ ವಲಸೆ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅನಾವರಣಗೊಳಿಸಿದ್ದು, ಈಗಿನ ‘ಗ್ರೀನ್ ಕಾರ್ಡ್’ಗಳ ಸ್ಥಾನವನ್ನು ‘ಬಿಲ್ಡ್ ಅಮೆರಿಕ’ ವೀಸಾ ವಹಿಸಿಕೊಳ್ಳಲಿದೆ. ನೂತನ ವಲಸೆ ನೀತಿಯು ಅತ್ಯಂತ ಕುಶಲ ಕೆಲಸಗಾರರ ಕೋಟವನ್ನು ಈಗಿನ 12 ಶೇಕಡದಿಂದ 57 ಶೇಕಡಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.

ಪ್ರತಿ ವರ್ಷ ಅಮೆರಿಕವು ಸುಮಾರು 11 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ವಿದೇಶಿಯರಿಗೆ ನೀಡುತ್ತದೆ. ಗ್ರೀನ್ ಕಾರ್ಡ್‌ಗಳನ್ನು ಪಡೆದ ವಲಸಿಗರು ಅಮೆರಿಕದಲ್ಲಿ ಜೀವನಪೂರ್ತಿ ಬದುಕಬಹುದಾಗಿದೆ ಹಾಗೂ ಕೆಲಸ ಮಾಡಬಹುದಾಗಿದೆ. ಅದೂ ಅಲ್ಲದೆ, ಐದು ವರ್ಷಗಳ ಬಳಿಕ, ಪೌರತ್ವ ಪಡೆಯಲೂ ಇದು ಸಹಾಯ ಮಾಡುತ್ತದೆ.

ಪ್ರಸಕ್ತ, ಹೆಚ್ಚಿನ ಸಂಖ್ಯೆಯ ಗ್ರೀನ್ ಕಾರ್ಡ್‌ಗಳನ್ನು ಕುಟುಂಬ ನಂಟು ಮತ್ತು ವೈವಿಧ್ಯ ವೀಸಾಗಳ ಆಧಾರದಲ್ಲಿ ನೀಡಲಾಗುತ್ತಿದೆ ಹಾಗೂ ಸಣ್ಣ ಪ್ರಮಾಣದ ಗ್ರೀನ್ ಕಾರ್ಡ್‌ಗಳನ್ನು ವೃತ್ತಿಪರರು ಮತ್ತು ಅತ್ಯುನ್ನತ ಕುಶಲ ಕೆಲಸಗಾರರಿಗೆ ನೀಡಲಾಗುತ್ತಿದೆ.

ಈ ವ್ಯವಸ್ಥೆಯನ್ನು ನಾನು ಬದಲಿಸಲು ಬಯಸಿದ್ದೇನೆ ಎಂಬುದಾಗಿ ಟ್ರಂಪ್ ಗುರುವಾರ ಹೇಳಿದರು ಹಾಗೂ ನೂತನ ವಲಸೆ ನೀತಿಯನ್ನು ಘೋಷಿಸಿದರು.

‘‘ಇಂದು ಇಲ್ಲಿ ವಾಸಿಸುತ್ತಿರುವವರಿಗೆ ನಾವು ಮಾಡಬೇಕಾಗಿರುವ ಕರ್ತವ್ಯವನ್ನು ನಮ್ಮ ನೂತನ ನೀತಿಯ ಪ್ರಸ್ತಾಪವು ಪೂರೈಸುತ್ತದೆ. ಅದೇ ವೇಳೆ, ನಾಳೆ ನಮ್ಮನ್ನು ಸೇರಬಯಸುವ ವಲಸಿಗರನ್ನು ಸ್ವಾಗತಿಸುವ ದೇಶವಾಗಿಯೂ ಅಮೆರಿಕ ಮುಂದುವರಿಯುತ್ತದೆ. ವಲಸಿಗರು ಬರುತ್ತಾ ಇರಬೇಕೆಂದು ನಾವು ಬಯಸುತ್ತೇವೆ’’ ಎಂದು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಹೇಳಿದರು.

‘‘ನಮ್ಮ ದೇಶ ತೆರೆದ ಬಾಗಿಲನ್ನು ಹೊಂದಬೇಕೆನ್ನುವುದು ನಮ್ಮ ಆಶೆ. ಆದರೆ ಈ ವಲಸಿಗರ ಪೈಕಿ ಹೆಚ್ಚಿನವರು ಪ್ರತಿಭೆ ಮತ್ತು ಕೌಶಲದ ಆಧಾರದಲ್ಲಿ ಬರಬೇಕಾಗುತ್ತದೆ’’ ಎಂದರು.

‘‘ಇದು ನಮ್ಮ ದೇಶಕ್ಕೆ ಬರುವ ವಲಸಿಗರ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಪ್ರಸಕ್ತ ಚಾಲ್ತಿಯಲ್ಲಿರುವ ಗ್ರೀನ್ ಕಾರ್ಡ್ ಬದಲಿಗೆ ನಾವು ‘ಬಿಲ್ಡ್ ಅಮೆರಿಕ’ ವೀಸಾ ಎಂಬ ನೂತನ ವೀಸಾವನ್ನು ಜಾರಿಗೆ ತರಲಿದ್ದೇವೆ’’ ಎಂದು ಸಭಿಕರ ಕರತಾಡನದ ಮಧ್ಯೆ ಟ್ರಂಪ್ ಹೇಳಿದರು.

ಅಂಕ ಆಧಾರಿತ ವ್ಯವಸ್ಥೆ

ಕೆನಡ ಮತ್ತು ಇತರ ಆಧುನಿಕ ದೇಶಗಳಂತೆ, ನನ್ನ ಆಡಳಿತವೂ ಅಂಕಗಳ ಆಧಾರಿತ ಆಯ್ಕೆ ವ್ಯವಸ್ಥೆಯೊಂದನ್ನು ನಿರ್ಮಿಸಲು ಮುಂದಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

‘‘ನೀವು ಯುವ ಕೆಲಸಗಾರರಾಗಿದ್ದರೆ ಹೆಚ್ಚು ಅಂಕಗಳನ್ನು ಪಡೆಯುವಿರಿ. ಅಂದರೆ ನೀವು ನಮ್ಮ ಸಾಮಾಜಿಕ ಸುರಕ್ಷತಾ ಜಾಲಕ್ಕೆ ಹೆಚ್ಚು ದೇಣಿಗೆ ನೀಡುತ್ತೀರಿ. ನೀವು ಅಮೂಲ್ಯ ಕೌಶಲ, ಉನ್ನತ ಶಿಕ್ಷಣ ಅಥವಾ ಉದ್ಯೋಗ ಸೃಷ್ಟಿಸುವ ಯೋಜನೆ ಹೊಂದಿದ್ದರೆ ನೀವು ಹೆಚ್ಚು ಅಂಕಗಳನ್ನು ಪಡೆಯುವಿರಿ’’ ಎಂದರು.

 ‘ದೂರದೃಷ್ಟಿಯಿಲ್ಲದ’ ಯೋಜನೆ

►ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಟೀಕೆ

 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರತಿಭೆ ಆಧಾರಿತ ವಲಸೆ ನೀತಿಯನ್ನು ಭಾರತ ಮೂಲದ ಪ್ರಥಮ ಸೆನೆಟರ್ ಕಮಲಾ ಹ್ಯಾರಿಸ್ ಟೀಕಿಸಿದ್ದಾರೆ. ಇದು ‘ದೂರದೃಷ್ಟಿಯಿಲ್ಲದ’ ಯೋಜನೆ ಎಂದು ಬಣ್ಣಿಸಿರುವ ಅವರು, ಓರ್ವ ಭಾರತೀಯ ವಲಸಿಗನ ಮಗಳಾಗಿ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿತ್ವಕ್ಕಾಗಿ ಸ್ಪರ್ಧಿಸುತ್ತಿರುವ ತನ್ನದೇ ಉದಾಹರಣೆಯನ್ನು ಅವರು ನೀಡಿದ್ದಾರೆ.

 ಅಮೆರಿಕನ್ನರು ನಿಯಮಿತವಾಗಿ ‘ಏಕೀಕೃತ ಸಂಸ್ಕೃತಿ’ಯನ್ನು ಆಚರಿಸುತ್ತಾರೆ ಹಾಗೂ ಅಮೆರಿಕದ ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ನೀಡುತ್ತದೆ ಎಂದು ಕ್ಯಾಲಿಫೋರ್ನಿಯದ ಸೆನೆಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News