ರಾಜೀನಾಮೆ ಘೋಷಿಸಿದ ಬ್ರಿಟನ್ ಪ್ರಧಾನಿ ತೆರೆಸಾ ಮೇ

Update: 2019-05-24 15:28 GMT

ಲಂಡನ್, ಮೇ 24: ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯನ್ನು ನಿಭಾಯಿಸಿದ ರೀತಿಗಾಗಿ ಹಲವು ತಿಂಗಳುಗಳಿಂದ ಎದುರಾಳಿಗಳು ಹಾಗೂ ಮಿತ್ರರಿಂದಲೂ ನಿರಂತರವಾಗಿ ವಿರೋಧವನ್ನು ಎದುರಿಸುತ್ತಾ ಬಂದಿರುವ ಬ್ರಿಟನ್ ಪ್ರಧಾನಿ ತೆರೇಸಾ ಮೇ, ಜೂನ್ 7ರಂದು ರಾಜೀನಾಮೆ ನೀಡುವುದಾಗಿ ಶುಕ್ರವಾರ ಭಾವುಕರಾಗಿ ಘೋಷಿಸಿದ್ದಾರೆ.

ಪ್ರಧಾನಿಯ ಅಧಿಕೃತ ನಿವಾಸ 10, ಡೌನಿಂಗ್ ಸ್ಟ್ರೀಟ್‌ನ ಹೊರಗಡೆ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತ ಮೇ, ನನ್ನ ಬ್ರೆಕ್ಸಿಟ್ ಒಪ್ಪಂದಕ್ಕೆ ಬೆಂಬಲ ನೀಡುವಂತೆ ಸಂಸದರನ್ನು ಬೆಂಬಲಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಹೇಳಿದರು. ‘‘ಆದರೆ, ಅವರ ಮನವೊಲಿಸುವಲ್ಲಿ ನಾನು ಯಶಸ್ವಿಯಾಗಲಿಲ್ಲ’’ ಎಂದರು.

ಮಾರ್ಗರೆಟ್ ಥ್ಯಾಚರ್ ಬಳಿಕ, ತೆರೇಸಾ ಮೇ ಬ್ರಿಟನ್‌ನ ಎರಡನೇ ಮಹಿಳಾ ಪ್ರಧಾನಿಯಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬ್ರಿಟನ್ ಭೇಟಿಯ ಬಳಿಕ, ಜೂನ್ 7ರಂದು ಅಧಿಕಾರದಿಂದ ಕೆಳಗಿಳಿಯುವುದಾಗಿ ಮೇ ಘೋಷಿಸಿದರು.

ಹೊಸ ‘ದಿಟ್ಟ’ ಬ್ರೆಕ್ಸಿಟ್ ಒಪ್ಪಂದವನ್ನು ಜೂನ್ 3ರ ವಾರದಲ್ಲಿ ಸಂಸದರ ಮುಂದೆ ಮಂಡಿಸುವುದಾಗಿ ತೆರೇಸಾ ಮೇ ಕಳೆದ ವಾರ ಭರವಸೆ ನೀಡಿದ್ದರು. ಆದರೆ, ಈ ಒಪ್ಪಂದಕ್ಕೆ ಪಕ್ಷದ ಒಳ ಮತ್ತು ಹೊರಗಿನಿಂದ ಮತ್ತಷ್ಟು ಮತ್ತಷ್ಟು ಹೆಚ್ಚಿನ ಟೀಕೆಗಳು ವ್ಯಕ್ತವಾದವು. ಇದು ಅವರ ರಾಜೀನಾಮೆ ಘೋಷಣೆಗೆ ತಕ್ಷಣದ ಕಾರಣವಾಯಿತು.

ಬೊರಿಸ್ ಜಾನ್ಸನ್ ಪ್ರಮುಖ ಸ್ಪರ್ಧಿ

ಮೇ ಅವರ ಸ್ಥಾನಕ್ಕೆ ಮಾಜಿ ವಿದೇಶ ಕಾರ್ಯದರ್ಶಿ ಬೊರಿಸ್ ಜಾನ್ಸನ್ ಪ್ರಮುಖ ಸ್ಪರ್ಧಿ ಎಂಬುದಾಗಿ ಭಾವಿಸಲಾಗಿದೆ. ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಮತ್ತು ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ಸೇರಿದಂತೆ ಪ್ರಧಾನಿ ಸ್ಥಾನಕ್ಕೆ ಇನ್ನೂ ಹಲವು ಸ್ಪರ್ಧಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News