ಇಂಗ್ಲೆಂಡ್‌ಗೆ 60 ಸೆಕೆಂಡ್ ಚಾಲೆಂಜ್ ವಿಶ್ವಕಪ್ !

Update: 2019-05-30 04:30 GMT

ಲಂಡನ್: ಐಸಿಸಿ ವಿಶ್ವಕಪ್ 2019 ಕ್ರಿಕೆಟ್ ಟೂರ್ನಿಗೆ ಬುಧವಾರ ವರ್ಣರಂಜಿತ ಆರಂಭ ದೊರಕಿದೆ. ಈ ಬಾರಿಯ ವಿಶ್ವಕಪ್ ಆರಂಭಕ್ಕೆ ಮುನ್ನವೇ ಅತಿಥೇಯ ಇಂಗ್ಲೆಂಡ್ 60 ಸೆಕೆಂಡ್ ಚಾಲೆಂಜ್ ಗೆಲ್ಲುವ ಮೂಲಕ ತವರಿನ ಪ್ರೇಕ್ಷಕರಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಟ್ಟುಹಾಕಿದೆ.

ಕೇಂದ್ರ ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನ ಎದುರು ಇರುವ ಮಾಲ್‌ನಲ್ಲಿ ನಡೆದ ಉದ್ಘಾಟನಾ ಪಾರ್ಟಿ ಕ್ರಿಕೆಟ್, ಸಂಗೀತ ಹಾಗೂ ಸಂಸ್ಕೃತಿಯ ಸಮ್ಮಿಲನವಾಗಿತ್ತು. 60 ಸೆಕೆಂಡ್ ಚಾಲೆಂಜ್ ಎಂಬ ಚಿಟಿಕೆ ಕ್ರಿಕೆಟ್ ಪ್ರೇಕ್ಷಕರನ್ನು ಮುದಗೊಳಿಸಿತು. ಇದರಲ್ಲಿ ಪ್ರತಿ ದೇಶವನ್ನು ಪ್ರತಿನಿಧಿಸುವ ಇಬ್ಬರು ಬ್ರಾಟ್ಸ್‌ಮನ್‌ಗಳು 60 ಸೆಕೆಂಡ್‌ಗಳಲ್ಲಿ ಸಾಧ್ಯವಾದಷ್ಟೂ ರನ್ ಗಳಿಸಲು ಅವಕಾಶ ಕಲ್ಪಿಸಲಾಗಿತ್ತು. ಡೇವಿಡ್ ಬೂನ್ ಇದಕ್ಕೆ ಅಂಪೈರ್ ಆಗಿದ್ದರು.

ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿವ್ ರಿಚರ್ಡ್ಸ್, ಜಾಕ್ವಿಸ್ ಕಾಲಿಸ್ ಹಾಗೂ ಬ್ರೆಟ್ ಲೀ ಕೂಡಾ ಇದರಲ್ಲಿ ಭಾಗವಹಿಸಿದ್ದರು.
ಕ್ರಿಸ್ ಹಗ್ಸ್ ಜತೆ ಸೇರಿದ ಕೆವಿನ್ ಪೀಟರ್‌ಸನ್ 74 ಸ್ಕೋರ್ ಗಳಿಸಿ ಇಂಗ್ಲೆಂಡಿನ ಭರ್ಜರಿ ವಿಜಯಕ್ಕೆ ಕಾರಣರಾದರು. ಆಸ್ಟ್ರೇಲಿಯಾದ ಬ್ರೆಟ್ ಲೀ ಮತ್ತು ಪ್ಯಾಟ್ ಕ್ಯಾಷ್ ಜೋಡಿ 69 ರನ್ ಗಳಿಸಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿತು. ಭಾರತದ ಮಾಜಿ ಬೌಲರ್ ಹಾಗೂ ಕೋಚ್ ಅನಿಲ್ ಕುಂಬ್ಳೆ ಮತ್ತು ಬಾಲಿವುಡ್ ತಾರೆ ಫರ್ಹಾನ್ ಅಖ್ತರ್ ಅವರನ್ನೊಳಗೊಂಡ ಭಾರತ ತಂಡ ಕೇವಲ 19 ರನ್ ಮಾತ್ರ ಗಳಿಸಿ, 60 ಸೆಕೆಂಡ್‌ಗಳಲ್ಲಿ ಕನಿಷ್ಠ ರನ್ ಗಳಿಸಿದ ತಂಡ ಎನಿಸಿಕೊಂಡಿತು.

ಬಳಿಕ 2015ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲರ್ಕ್ ಅವರು ವಿಶ್ವಕಪ್ ಟ್ರೋಫಿಯನ್ನು ಇಂಗ್ಲೆಂಡಿನ ಗ್ರೇಮ್ ಸ್ವಾನ್ ಜತೆ ಸೇರಿ ವೇದಿಕೆಗೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News