ವಿಶ್ವಕಪ್‌ನಲ್ಲಿ ಮೊದಲ ಓವರ್ ಬೌಲಿಂಗ್ ಮಾಡಿದ ಮೊದಲ ಸ್ಪಿನ್ನರ್ ತಾಹಿರ್

Update: 2019-05-30 15:16 GMT

ಲಂಡನ್, ಮೇ 30: ದಕ್ಷಿಣ ಆಫ್ರಿಕದ ಇಮ್ರಾನ್ ತಾಹಿರ್ ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲಿ ಮೊದಲ ಓವರ್ ಎಸೆದ ಮೊದಲ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ದಿ ಓವಲ್‌ನಲ್ಲಿ ಗುರುವಾರ ಆರಂಭವಾದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿ ಬೌಲಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡದ ನಾಯಕ ಎಫ್‌ಡು ಪ್ಲೆಸಿಸ್, ತಾಹಿರ್‌ಗೆ ಹೊಸ ಚೆಂಡನ್ನು ಕೈಗಿತ್ತು ಮೊದಲ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದರು.

  ನಾಯಕ ಪ್ಲೆಸಿಸ್ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದ ತಾಹಿರ್ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್(0) ವಿಕೆಟನ್ನು ಉಡಾಯಿಸಿ ಆತಿಥೇಯರಿಗೆ ಭಾರೀ ಆಘಾತ ನೀಡಿದರು. ತಾಹಿರ್ ಅವರ ಉತ್ತಮ ಲೆಂಗ್ತ್ ಎಸೆತವನ್ನು ಗುರುತಿಸಲು ವಿಫಲವಾದ ಬೈರ್‌ಸ್ಟೋವ್ ಮುನ್ನುಗ್ಗಿ ಆಡಲು ಯತ್ನಿಸಿದಾಗ ಬ್ಯಾಟ್ ಚೆಂಡನ್ನು ಸ್ಪರ್ಶಿಸಿತು. ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್ ಯಾವುದೇ ತಪ್ಪೆಸಗದೆ ಕ್ಯಾಚ್ ಪಡೆದರು. ಬೈರ್‌ಸ್ಟೊವ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ನತ್ತ ಸಾಗಿದರು.

ತನ್ನ ಎಂದಿನ ಶೈಲಿಯಲ್ಲಿ ಮೈದಾನದೆಲ್ಲೆಡೆ ಓಡಿ ಸಂಭ್ರಮಿಸಿದ 40ರ ಹರೆಯದ ತಾಹಿರ್ ಈ ವರ್ಷದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 26 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯ ಯಶಸ್ವಿ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್‌ನ್ನು ತನ್ನದಾಗಿಸಿಕೊಂಡಿದ್ದರು.

ಮೊದಲ ಓವರ್‌ನಲ್ಲಿ ಸ್ಪಿನ್ನರ್‌ನ್ನು ಬೌಲಿಂಗ್‌ಗಿಳಿಸಿದ ಪ್ಲೆಸಿಸ್ ತಂತ್ರಗಾರಿಕೆ 1992ರ ಆವೃತ್ತಿಯ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್‌ನ ದಿಗ್ಗಜ ಮಾರ್ಟಿನ್ ಕ್ರೌವ್ ನಿರ್ಧಾರವನ್ನು ನೆನಪಿಸಿತು. 1992ರ ವಿಶ್ವಕಪ್‌ನಲ್ಲಿ ಕ್ರೋವ್ ಆಸ್ಟ್ರೇಲಿಯ ವಿರುದ್ಧ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಆಫ್-ಸ್ಪಿನ್ನರ್ ದೀಪಕ್ ಪಟೇಲ್‌ರನ್ನು ಬೌಲಿಂಗ್‌ಗೆ ಇಳಿಸಿದ್ದರು. ಆ ಪಂದ್ಯವನ್ನು ಕಿವೀಸ್ 37 ರನ್‌ಗಳಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News