ನೀರವ್ ಮೋದಿಯ ನ್ಯಾಯಾಂಗ ಬಂಧನ ಜೂನ್ 27 ವರೆಗೆ ವಿಸ್ತರಣೆ

Update: 2019-05-30 18:14 GMT

ಲಂಡನ್, ಮೇ 30: ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ)ಗೆ ಸುಮಾರು 14,000 ಕೋಟಿ ರೂಪಾಯಿ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿಯ ನ್ಯಾಯಾಂಗ ಬಂಧನವನ್ನು ಬ್ರಿಟನ್‌ನ ನ್ಯಾಯಾಲಯವೊಂದು ಗುರುವಾರ ಜೂನ್ 27ರವರೆಗೆ ವಿಸ್ತರಿಸಿದೆ.

ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿ ಭಾರತವು ನ್ಯಾಯಾಲಯದಲ್ಲಿ ಈಗಾಗಲೇ ವ್ಯಾಜ್ಯ ಹೂಡಿದೆ.

48 ವರ್ಷದ ವಜ್ರದ ವ್ಯಾಪಾರಿಯನ್ನು ನೈರುತ್ಯ ಲಂಡನ್‌ನಲ್ಲಿರುವ ವಾಂಡ್ಸ್‌ವರ್ತ್ ಜೈಲಿನಲ್ಲಿ ಇಡಲಾಗಿದೆ. ಈ ತಿಂಗಳ ಆದಿ ಭಾಗದಲ್ಲಿ, ಮೋದಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಆರ್ಬತ್‌ನಾಟ್, ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ತಿರಸ್ಕರಿಸಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಮೋದಿ ಅದೇ ಜೈಲಿನಲ್ಲಿದ್ದಾರೆ.

ಪ್ರಕರಣದ ಮೊದಲ ಕೇಸ್ ಮ್ಯಾನೇಜ್‌ಮೆಂಟ್ ವಿಚಾರಣೆಗಾಗಿ ಮೋದಿಯನ್ನು ಇಂದು ಎಮ್ಮಾ ಆರ್ಬತ್‌ನಾಟ್‌ರ ಎದುರು ಹಾಜರುಪಡಿಸಿದಾಗ, ನ್ಯಾಯಾಂಗ ಬಂಧನವನ್ನು ಜೂನ್ 27ರವರೆಗೆ ಮುಂದುವರಿಸಿ ಆದೇಶ ಹೊರಡಿಸಿದರು.

ಮೋದಿಯನ್ನು ಯಾವ ಜೈಲಿನಲ್ಲಿ ಇಡಲಾಗುತ್ತದೆ ಎಂಬ ಬಗ್ಗೆ 14 ದಿನಗಳ ಒಳಗೆ ಮಾಹಿತಿಯನ್ನು ನೀಡುವಂತೆಯೂ ನ್ಯಾಯಾಧೀಶೆ ಭಾರತ ಸರಕಾರಕ್ಕೆ ಸೂಚಿಸಿದರು.

ಮಧ್ಯ ಲಂಡನ್‌ನಲ್ಲಿರುವ ಮೆಟ್ರೊ ಬ್ಯಾಂಕ್ ಶಾಖೆಯಲ್ಲಿ ಮಾರ್ಚ್ 19ರಂದು ಹೊಸ ಬ್ಯಾಂಕ್ ಖಾತೆಯೊಂದನ್ನು ತೆರೆಯಲು ಮೋದಿ ಯತ್ನಿಸುತ್ತಿದ್ದಾಗ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಅವರನ್ನು ಬಂಧಿಸಿದ್ದರು. ಅಂದಿನಿಂದ ಮೋದಿ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News