ಟ್ರಂಪ್ ಜತೆಗಿನ ಶೃಂಗಸಭೆ ವಿಫಲವಾಗಿದ್ದಕ್ಕೆ ತನ್ನ ಅಮೆರಿಕ ರಾಯಭಾರಿಯನ್ನು ಗುಂಡಿಕ್ಕಿ ಸಾಯಿಸಿದ ಉತ್ತರ ಕೊರಿಯಾ: ವರದಿ

Update: 2019-05-31 07:12 GMT

ಸಿಯೋಲ್, ಮೇ 31: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಫೆಬ್ರವರಿ ತಿಂಗಳಲ್ಲಿ ಹೆನಾಯ್ ನಲ್ಲಿ ನಡೆದ ಶೃಂಗಸಭೆ ವಿಫಲವಾಗಿರುವ ಕಾರಣಕ್ಕೆ ವಾಷಿಂಗ್ಟನ್ ಜತೆ ಪರಮಾಣು ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿದ್ದ ಅಮೆರಿಕದಲ್ಲಿನ ಉತ್ತರ ಕೊರಿಯಾದ ವಿಶೇಷ ರಾಯಭಾರಿ ಕಿಮ್ ಹಯೊಕ್-ಚೊಲ್ ಅವರನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ದೈನಿಕ ಚೋಸುನ್ ಇಲ್ಬೊ ವರದಿ ಮಾಡಿದೆ.

ಶೃಂಗಸಭೆಗೆ ಏರ್ಪಾಟು ಮಾಡಿದ ನಾಲ್ಕು ಮಂದಿ ವಿದೇಶಾಂಗ ಸಚಿವಾಲಯ ಅಧಿಕಾರಿಗಳಿಗೂ ಕಿಮ್ ಹ್ಯೊಕ್-ಚೊಲ್  ಅವರಿಗಾದ ಗತಿಯೇ ಆಗಿದೆಯೆಂದೂ ಪತ್ರಿಕೆ ವರದಿ ಮಾಡಿದೆ ಹಾಗೂ ಅವರಿಗೆ ಈ ಶಿಕ್ಷೆ ಮಾರ್ಚ್ ತಿಂಗಳಲ್ಲಿಯೇ ವಿಧಿಸಲಾಗಿದೆ ಎಂಬ ಮಾಹಿತಿಯಿದೆ.

ಅಮೆರಿಕಾಗಾಗಿ ಗೂಢಚರ್ಯೆ ನಡೆಸಿದ ಆರೋಪ ಅವರ ಮೇಲಿದೆ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಗಳು ಇನ್ನೂ ದೃಢಪಟ್ಟಿಲ್ಲವಾದರೂ ಉತ್ತರ ಕೊರಿಯಾ ಈ ಸುದ್ದಿಯನ್ನು ಅಲ್ಲಗೆಳೆದಿಲ್ಲ. ಆದರೆ ಈ ಹಿಂದೆ ಇಂತಹ ವರದಿಗಳು ಮಾದ್ಯಮದಲ್ಲಿ ಪ್ರಕಟಗೊಂಡಿದ್ದಾಗ ಉತ್ತರ ಕೊರಿಯಾ ಅದನ್ನು ಅಲ್ಲಗಳೆದಿತ್ತು.

ಕಿಮ್ ಹಯೊಕ್-ಚೊಲ್ ಅವರ ವಿಚಾರಣೆ ನಡೆಸಿದ ನಂತರ  ಅವರನ್ನು ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ಉಪನಗರಿಯಲ್ಲಿರುವ ಮಿರಿಮ್ ಏರ್ ಫೀಲ್ಡ್ ನಲ್ಲಿ ಫೈರಿಂಗ್ ಸ್ಕ್ವಾಡ್  ಮೂಲಕ ಗುಂಡಿಕ್ಕಿ ಸಾಯಿಸಲಾಗಿದೆ ಎಂದು  ದಕ್ಷಿಣ ಕೊರಿಯದ ದೈನಿಕ ಚೊಸುನ್ ಇಲ್ಬೊ ವರದಿಯಲ್ಲಿ ತಿಳಿಸಲಾಗಿದೆಯೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News