×
Ad

ಸ್ಪೆಲ್ಲಿಂಗ್ ಬೀ ಸ್ಪರ್ಧೆ: 8 ಮಕ್ಕಳು ಜಂಟಿ ವಿಜೇತರು

Update: 2019-05-31 22:50 IST

ಆಕ್ಸಾನ್ ಹಿಲ್ (ಮೇರಿಲ್ಯಾಂಡ್), ಮೇ 31: ‘ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲ್ಲಿಂಗ್ ಬೀ’ ಸ್ಪರ್ಧೆಯಲ್ಲಿ 8 ಅದ್ಭುತ ಸ್ಪೆಲ್ಲಿಂಗ್ ಮಾಂತ್ರಿಕರನ್ನು ಜಂಟಿ ವಿಜೇತರು ಎಂಬುದಾಗಿ ಘೋಷಿಸಲಾಗಿದೆ.

ಸ್ಪೆಲ್ಲಿಂಗ್ ಹೇಳುವ ಅಮೆರಿಕದ ಸ್ಪರ್ಧೆಯು 1925ರಲ್ಲಿ ಆರಂಭಗೊಂಡ ಬಳಿಕ, ಎರಡಕ್ಕಿಂತ ಹೆಚ್ಚು ಜಂಟಿ ವಿಜೇತರ ಆಯ್ಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸ್ಪರ್ಧೆಯು ಮೇರಿಲ್ಯಾಂಡ್ ರಾಜ್ಯದ ನ್ಯಾಶನಲ್ ಹಾರ್ಬರ್‌ನಲ್ಲಿನ ಗೇಲಾರ್ಡ್ ನ್ಯಾಶನಲ್ ರಿಸಾರ್ಟ್‌ನಲ್ಲಿ ನಡೆಯಿತು.

ಶುಕ್ರವಾರ ಮುಂಜಾನೆಯವರೆಗೂ ಮುಂದುವರಿದ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನು ಹೊರಹಾಕಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ, ಎಲ್ಲ 8 ಜಂಟಿ ವಿಜೇತರಿಗೆ ತಲಾ 50,000 ಡಾಲರ್ (ಸುಮಾರು 35 ಲಕ್ಷ ರೂಪಾಯಿ) ನಗದು ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು.

ಅದೇ ವೇಳೆ, ತಮ್ಮ ಜಂಟಿ ಯಶಸ್ಸಿನ ಸ್ಮರಣೆಗಾಗಿ ಈ ಸ್ಪೆಲಿಂಗ್ ವಿಜೇತರು ‘ಓಕ್ಟೋಚಾಂಪ್ಸ್’ (ಎಂಟು ಮಂದಿ ಚಾಂಪಿಯನ್‌ಗಳು) ಎಂಬ ತಮ್ಮದೇ ಆದ ಪದವೊಂದನ್ನು ಸೃಷ್ಟಿಸಿದರು.

‘‘ನಾವು ಡಿಕ್ಶನರಿಯನ್ನು ನಿಮಗೆ ಕೊಡುತ್ತಲೇ ಬಂದಿದ್ದೇವೆ. ಈವರೆಗೆ, ಯಾರು ಧಣಿ ಎನ್ನುವುದನ್ನು ನೀವು ಡಿಕ್ಶನರಿಗೆ ತೋರಿಸುತ್ತಾ ಬಂದಿದ್ದೀರಿ’’ ಎಂದು ಸ್ಪರ್ಧೆಯ ಉದ್ಘೋಷಕ ಜಾಕ್ ಬೇಲಿ ಅಂತಿಮ ಸುತ್ತಿನ ಸ್ಪರ್ಧಿಗಳಿಗೆ ಹೇಳಿದರು.

ಸ್ಪರ್ಧೆಯು ಮಂಗಳವಾರ ಆರಂಭಗೊಂಡಿತು. ಅಮೆರಿಕ, ಅಮೆರಿಕ ಆಡಳಿತದ ಭೂಭಾಗಗಳು ಮತ್ತು ಇತರ ಆರು ದೇಶಗಳ ಒಟ್ಟು 562 ಸ್ಪರ್ಧಿಗಳು ಭಾಗವಹಿಸಿದರು. ಅಮೆರಿಕಕ್ಕೆ ಹೊರತಾದ ಆರು ದೇಶಗಳೆಂದರೆ ಬಹಾಮಾಸ್, ಕೆನಡ, ಘಾನಾ, ಜಮೈಕ, ಜಪಾನ್ ಮತ್ತು ದಕ್ಷಿಣ ಕೊರಿಯ.

ಅಂತಿಮ ಸುತ್ತು ಗುರುವಾರ ರಾತ್ರಿ ಆರಂಭಗೊಂಡಿತು. ಸ್ಪರ್ಧೆಯಲ್ಲಿದ್ದ ಮಕ್ಕಳು ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಗಳನ್ನು ಹೇಳುತ್ತಾ ಬಂದರು. ತಡರಾತ್ರಿಯ ವೇಳೆಗೆ, ಅಧಿಕಾರಿಗಳು ನಿಯಮದಲ್ಲಾದ ಬದಲಾವಣೆಯನ್ನು ಘೋಷಿಸಿದರು. 20ನೇ ಸುತ್ತಿನ ಕೊನೆಯಲ್ಲಿ ಉಳಿದಿರುವ ಎಲ್ಲ ಮಕ್ಕಳು ವಿಜಯಿಯಾಗುತ್ತಾರೆ ಎಂಬುದಾಗಿ ಘೋಷಿಸಲಾಯಿತು.

‘‘ಈ ನಿರ್ಧಾರವನ್ನು ಇಂದು ಮುಂಚೆಯೇ ತೆಗೆದುಕೊಳ್ಳಲಾಗಿತ್ತು’’ ಎಂದು ಸ್ಪರ್ಧೆಯ ನಿರ್ದೇಶಕಿ ಹಾಗೂ 1981ರಲ್ಲಿ ಬೀ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಪೇಜ್ ಕಿಂಬಾಲ್ ಹೇಳಿದರು.

‘‘ಈ ಮಕ್ಕಳ ಗುಂಪಿಗೆ ಸವಾಲು ಹಾಕಬಲ್ಲ ಪದಗಳು ಮುಗಿಯುತ್ತಾ ಬರುತ್ತಿವೆ’’ ಎಂಬುದಾಗಿ ಅಧಿಕಾರಿಯೊಬ್ಬರು ಅವರಿಗೆ ಗುರುವಾರ ತಡ ರಾತ್ರಿ ಹೇಳಿದ್ದರು.

ಮಧ್ಯರಾತ್ರಿಯ ಬಳಿಕ ಸ್ಪರ್ಧೆಯಲ್ಲಿ ಎಂಟು ಮಕ್ಕಳು ಉಳಿದಿದ್ದರು. ಅವರೆಲ್ಲರನ್ನೂ ವಿಜಯಿಗಳು ಎಂಬುದಾಗಿ ಘೋಷಿಸಲಾಯಿತು. ಅವರ ಪೈಕಿ ಆರು ಮಂದಿ ಭಾರತ ಮೂಲದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News