ಭ್ರಷ್ಟಾಚಾರ ಪ್ರಕರಣ: ಜೆಟ್ ಏರ್‌ವೇಸ್ ಮಾಜಿ ಸಿಇಒಗೆ ಲುಕೌಟ್ ನೋಟಿಸ್ ಜಾರಿ

Update: 2019-06-01 16:33 GMT

ಹೊಸದಿಲ್ಲಿ, ಜೂ. 1: ಜೆಟ್ ಏರ್‌ವೇಸ್ ವಿಮಾನ ಸಂಚಾರ ನಿರ್ವಹಣೆಯಲ್ಲಿ ನಡೆದ ಆರ್ಥಿಕ ಅಕ್ರಮಗಳ ತನಿಖೆ ಮುಂದುವರಿಯುತ್ತಿರುವುದರಿಂದ ಜೆಟ್ ಏರ್‌ವೇಸ್‌ನ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಮಾತ್ರವಲ್ಲದೆ, ಅದರ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ದುಬೆ ಭಾರತ ತ್ಯಜಿಸದಂತೆ ನಿರ್ಬಂಧ ಹೇರಲಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಹಿಂದೆ ನರೇಶ್ ಗೋಯಲ್ ಅವರಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಿದಂತೆ ವಿನಯ್ ದುಬೆಗೆ ಕೂಡ ಲುಕೌಟ್ ನೋಟಿಸ್ ಜಾರಿಗೊಳಿಸಿದೆ. ವೈಯುಕ್ತಿಕ ಕಾರಣಕ್ಕಾಗಿ ದುಬೆ ಅವರು ಮೇ 14ರಂದು ಕಂಪೆನಿಯ ಸೇವೆಗೆ ರಾಜೀನಾಮೆ ನೀಡಿದ್ದರು. ಆರ್ಥಿಕ ಅಪರಾಧ ಎಸಗಿದ್ದಾರೆ ಎಂದು ಶಂಕಿಸಲಾದ 20ಕ್ಕೂ ಅಧಿಕ ಮಂದಿಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಲುಕೌಟ್ ನೋಟಿಸ್ ಜಾರಿಗೊಳಿಸಿದೆ. ಈ ಪಟ್ಟಿಯಲ್ಲಿ ದುಬೆ ಅವರು ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ನಿಧಿಯನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸಿರುವವರು ಹಾಗೂ ಹಣ ವರ್ಗಾವಣೆಯಲ್ಲಿ ನಡೆದಿರುವ ಗಂಭೀರ ವಂಚನೆ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವರಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News