ವಿಶ್ವಕಪ್: ದಕ್ಷಿಣ ಆಫ್ರಿಕಕ್ಕೆ 331 ಗುರಿ ನೀಡಿದ ಬಾಂಗ್ಲಾದೇಶ
ಲಂಡನ್, ಜೂ.2: ಮುಶ್ಫಿಕುರ್ರಹೀಮ್(78) ಹಾಗೂ ಶಾಕಿಬ್ ಅಲ್ ಹಸನ್(75)ಅರ್ಧಶತಕದ ಕೊಡುಗೆ ನೆರವಿನಿಂದ ಬಾಂಗ್ಲಾದೇಶ ತಂಡ ವಿಶ್ವಕಪ್‌ನ 5ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಗೆಲುವಿಗೆ 331 ರನ್ ಗುರಿ ನೀಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕ ತಂಡ ಬಾಂಗ್ಲಾದೇಶವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 330 ರನ್ ಗಳಿಸಲು ಸಮರ್ಥವಾಯಿತು.
ಇನಿಂಗ್ಸ್ ಆರಂಭಿಸಿದ ತಮೀಮ್ ಇಕ್ಬಾಲ್(16) ಹಾಗೂ ಸೌಮ್ಯ ಸರ್ಕಾರ್(42)ಮೊದಲ ವಿಕೆಟ್‌ಗೆ 60 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಇಕ್ಬಾಲ್ ಹಾಗೂ ಸರ್ಕಾರ್ ಬೆನ್ನುಬೆನ್ನಿಗೆ ಔಟಾದಾಗ ಜೊತೆಯಾದ ಹಸನ್(75, 84 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ರಹೀಂ(78, 80 ಎಸೆತ, 8 ಬೌಂಡರಿ)3ನೇ ವಿಕೆಟ್‌ಗೆ 142 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.
ಕೆಳ ಕ್ರಮಾಂಕದಲ್ಲಿ ಮಹ್ಮೂದುಲ್ಲಾ(ಔಟಾಗದೆ 46, 33 ಎಸೆತ) ಹಾಗೂ ಮೊಸಾಡೆಕ್ ಹುಸೇನ್(26)6ನೇ ವಿಕೆಟ್‌ಗೆ 66 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ದ.ಆಫ್ರಿಕದ ಪರ ಫೆಹ್ಲುಕ್ವಾಯೊ(2-52), ಇಮ್ರಾನ್ ತಾಹಿರ್(2-57) ಹಾಗೂ ಮೊರಿಸ್(2-73) ತಲಾ 2 ವಿಕೆಟ್ ಪಡೆದರು.