ಲಂಡನ್ ಮೇಯರ್ ಸಾದಿಕ್ ಖಾನ್ ‘ಭಾವನೆಗಳೇ ಇಲ್ಲದ ಸೋತ ಮನುಷ್ಯ’: ಟ್ರಂಪ್ ಬಣ್ಣನೆ

Update: 2019-06-03 18:15 GMT

ಲಂಡನ್, ಜೂ. 3: ಮೂರು ದಿನಗಳ ಬ್ರಿಟನ್ ಪ್ರವಾಸಕ್ಕಾಗಿ ಸೋಮವಾರ ಲಂಡನ್‌ಗೆ ಆಗಮಿಸುತ್ತಿದ್ದಂತೆಯೇ, ಲಂಡನ್ ಮೇಯರ್ ಸಾದಿಕ್ ಖಾನ್ ಜೊತೆಗಿನ ತನ್ನ ದೀರ್ಘಕಾಲೀನ ವೈರತ್ವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರುಚಾಲನೆ ನೀಡಿದ್ದಾರೆ.

ಲಂಡನ್‌ಗೆ ಕಾಲಿಡುತ್ತಿರುವಂತೆಯೇ, ಟ್ರಂಪ್ ಅವರು ಸಾದಿಕ್ ಖಾನ್‌ರನ್ನು ‘ಭಾವನೆಗಳೇ ಇಲ್ಲದ ಸೋತ ಮನುಷ್ಯ’ ಎಂಬುದಾಗಿ ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಗೆ ಬ್ರಿಟನ್‌ನಲ್ಲಿ ‘ಕೆಂಪು ಹಾಸಿನ ಸ್ವಾಗತ’ ನೀಡುತ್ತಿರುವುದನ್ನು ಸಾದಿಕ್ ಖಾನ್ ಟೀಕಿಸಿರುವುದಕ್ಕೆ ಪ್ರತಿಯಾಗಿ ಟ್ರಂಪ್ ಈ ಟ್ವೀಟ್ ಮಾಡಿದ್ದಾರೆ.

‘‘ಯಾವ ರೀತಿಯಿಂದ ನೋಡಿದರೂ, ಲಂಡನ್ ಮೇಯರ್ ಆಗಿ ಅಸಂಬದ್ಧ ಕೆಲಸ ಮಾಡಿರುವ ಸಾದಿಕ್ ಖಾನ್, ಬ್ರಿಟನ್‌ನ ಈವರೆಗಿನ ಅತ್ಯಂತ ಮಹತ್ವದ ಮಿತ್ರದೇಶವಾಗಿರುವ ಅಮೆರಿಕದ ಅಧ್ಯಕ್ಷರ ಪ್ರವಾಸಕ್ಕೆ ಕ್ಷುಲ್ಲಕ ಪ್ರತಿಕ್ರಿಯೆ ನೀಡಿದ್ದಾರೆ’’ ಎಂದು ಟ್ರಂಪ್ ಹೇಳಿದ್ದಾರೆ.

‘‘ಅವರು ಭಾವನೆಗಳೇ ಇಲ್ಲದ ಸೋತ ಮನುಷ್ಯ. ಅವರು ಲಂಡನ್‌ನಲ್ಲಿನ ಅಪರಾಧದ ಬಗ್ಗೆ ಗಮನ ಹರಿಸಬೇಕೇ ಹೊರತು ನನ್ನ ಮೇಲಲ್ಲ’’ ಎಂಬುದಾಗಿ ಟ್ರಂಪ್ ಬರೆದಿದ್ದಾರೆ.

ಟ್ರಂಪ್ ಮತ್ತು ಖಾನ್ ಹಿಂದಿನಿಂದಲೂ ಟ್ವಿಟರ್‌ನಲ್ಲಿ ಜಗಳವಾಡುತ್ತಲೇ ಬಂದಿದ್ದಾರೆ. ರವಿವಾರ ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಖಾನ್, ಟ್ರಂಪ್‌ರನ್ನು 1930 ಮತ್ತು 40ರ ದಶಕಗಳ ಯುರೋಪಿಯನ್ ಸರ್ವಾಧಿಕಾರಿಗಳಿಗೆ ಹೋಲಿಸಿದ್ದಾರೆ.

ಟ್ರಂಪ್ ‘‘ಉದ್ದೇಶಪೂರ್ವಕವಾಗಿ ವಿದೇಶಿಯರ ಭಯ ಮತ್ತು ಜನಾಂಗವಾದವನ್ನು ಬಳಸುತ್ತಿದ್ದಾರೆ ಹಾಗೂ ‘ಇತರರನ್ನು’ ಚುನಾವಣಾ ತಂತ್ರಗಾರಿಕೆಯಾಗಿ ಬಳಸುತ್ತಿದ್ದಾರೆ ಎಂಬುದಾಗಿ ಸಾದಿಕ್ ಖಾನ್ ತನ್ನ ಲೇಖನದಲ್ಲಿ ಬರೆದಿದ್ದಾರೆ ಹಾಗೂ ಮುಸ್ಲಿಮ್ ದೇಶಗಳ ಜನರ ಅಮೆರಿಕ ಪ್ರಯಾಣವನ್ನು ನಿಷೇಧಿಸಿರುವುದಕ್ಕಾಗಿ ಟ್ರಂಪ್ ವಿರುದ್ಧ ಹರಿಹಾಯ್ದಿದ್ದಾರೆ.

 ‘ಮಗು ಟ್ರಂಪ್’ರ ಬೃಹತ್ ಬಲೂನು ಹಾರಾಟ

ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ನಡೆದ ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ‘ಮಗು ಟ್ರಂಪ್’ರ ಚಿತ್ರವನ್ನು ಹೊತ್ತ ಬೃಹತ್ ಬಲೂನ್ ಈ ವಾರ ಮತ್ತೆ ಮುನ್ನೆಲೆಗೆ ಬಂದಿದೆ. ಟ್ರಂಪ್ ಈ ವರ್ಷ ಮತ್ತೆ ಅಧಿಕೃತ ಪ್ರವಾಸಕ್ಕಾಗಿ ಬ್ರಿಟನ್‌ಗೆ ಸೋಮವಾರ ಮರಳಿದ್ದಾರೆ.

ಟ್ರಂಪ್ ತನ್ನ ಬ್ರಿಟನ್ ಪ್ರವಾಸದ ವೇಳೆ ಭೇಟಿ ನೀಡುವ ಸ್ಥಳಗಳಲ್ಲೆಲ್ಲ ‘ಮಗು ಟ್ರಂಪ್’ರ ಚಿತ್ರಗಳನು ಹೊತ್ತ ಬಲೂನುಗಳನ್ನು ಹಾರಿಸಲಾಗುವುದು ಎಂದು ಕಾರ್ಯಕರ್ತರು ಹೇಳಿದ್ದಾರೆ.

ಟ್ರಂಪ್‌ರ ಪರಿಸರ ನೀತಿಗಳಿಂದ ಹಿಡಿದು ಮಹಿಳಾ ಹಕ್ಕುಗಳ ದಮನ ನೀತಿಗಳ ವಿರುದ್ಧ ಈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆರು ಮೀಟರ್ ಎತ್ತರದ ಬೃಹತ್ ಬಲೂನು ಕಳೆದ ವರ್ಷ ಲಕ್ಷಾಂತರ ಟ್ರಂಪ್ ವಿರೋಧಿ ಪ್ರತಿಭಟನಕಾರರ ಪ್ರಮುಖ ಆಕರ್ಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News