ವಿಶ್ವಕಪ್: ಶ್ರೀಲಂಕಾ 201 ರನ್‌ಗೆ ಆಲೌಟ್

Update: 2019-06-04 15:30 GMT

ಕಾರ್ಡಿಫ್, ಜೂ.4: ಅಫ್ಘಾನಿಸ್ತಾನದ ವಿರುದ್ಧ ಮಂಗಳವಾರ ಇಲ್ಲಿ ನಡೆದ ಮಳೆಬಾಧಿತ ವಿಶ್ವಕಪ್ ಕ್ರಿಕೆಟ್‌ನ 7ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ 36.5 ಓವರ್‌ಗಳಲ್ಲಿ 201 ರನ್ ಗಳಿಸಿ ಆಲೌಟಾಗಿದೆ.

ಮಳೆಯಿಂದಾಗಿ ಅಫ್ಘಾನಿಸ್ತಾನಕ್ಕೆ ಪರಿಷ್ಕೃತ ಗುರಿ ನಿಗದಿಪಡಿಸಲಾಗಿದ್ದು, 41 ಓವರ್‌ಗಳಲ್ಲಿ ಗೆಲ್ಲಲು 187 ರನ್ ಗಳಿಸಬೇಕಾಗಿದೆ.

ಉತ್ತಮ ಆರಂಭ ಪಡೆದಿದ್ದ ಶ್ರೀಲಂಕಾ ದೊಡ್ಡ ಮೊತ್ತ ಗಳಿಸುವತ್ತ ಹೆಜ್ಜೆ ಇಟ್ಟಿತ್ತು. ಆಗ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಅಫ್ಘಾನಿಸ್ತಾನದ ಆಫ್ ಸ್ಪಿನ್ನರ್ ಮುಹಮ್ಮದ್ ನಬಿ ಶ್ರೀಲಂಕಾದ ಅಗ್ರ ಸರದಿಯನ್ನು ಭೇದಿಸಿದ್ದಲ್ಲದೆ, ಲಂಕಾದ ದಿಢೀರ್ ಕುಸಿತಕ್ಕೆ ಕಾರಣರಾದರು.

ಇಲ್ಲಿನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ 21ನೇ ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಇನಿಂಗ್ಸ್‌ನ 22ನೇ ಓವರ್ ಬೌಲಿಂಗ್ ಮಾಡಲು ಇಳಿದ ನಬಿ ಸ್ಪಿನ್ ಮ್ಯಾಜಿಕ್‌ನ ಮೂಲಕ ಪಂದ್ಯವನ್ನು ಅಫ್ಘಾನ್‌ನತ್ತ ತಿರುಗಿಸಿದರು.

 21.2ನೇ ಓವರ್‌ನಲ್ಲಿ ವನ್‌ಡೌನ್ ದಾಂಡಿಗ ತಿರಿಮನ್ನೆ(25) ವಿಕೆಟನ್ನು ಪಡೆದ ನಬಿ, ಸ್ಲಿಪ್‌ನಲ್ಲಿ ಫೀಲ್ಡರ್‌ನ್ನು ನಿಲ್ಲಿಸಿ ಹೊಸ ದಾಂಡಿಗ ಕುಸಾಲ್ ಮೆಂಡಿಸ್‌ಗೆ ಒತ್ತಡ ಹೇರಿದರು. ಮೆಂಡಿಸ್(2)21.4ನೇ ಓವರ್‌ನಲ್ಲಿ ರಹ್ಮತ್ ಶಾಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಶ್ರೀಲಂಕಾದ ಹಿರಿಯ ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್(0) ಕಟ್‌ಶಾಟ್‌ನ್ನು ಆಡಲು ಪ್ರಯತ್ನಿಸಿ 21.6ನೇ ಓವರ್‌ನಲ್ಲಿ ರಹ್ಮತ್ ಶಾಗೆ ಕ್ಯಾಚ್ ನೀಡಿದರು. ನಬಿ ತಾನೆಸೆದ 5ನೇ ಓವರ್‌ನಲ್ಲಿ ಕೇವಲ 5 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದರು.

 ಅಫ್ಘಾನ್‌ನ ವೇಗದ ಬೌಲರ್‌ಗಳು ಹೊಸ ಚೆಂಡಿನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದಾಗ ನಾಯಕ ಗುಲ್ಬದ್ದೀನ್ ನೈಬ್ 34ರ ಹರೆಯದ ನಬಿ ಅವರನ್ನು ಇನಿಂಗ್ಸ್‌ನ 7ನೇ ಓವರ್‌ನಲ್ಲಿ ದಾಳಿಗಿಳಿಸಿದರು. ನಬಿ ಲಂಕೆಯ ರನ್ ವೇಗಕ್ಕೆ ತಕ್ಷಣವೇ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಲಂಕಾದ ನಾಯಕ ಕರುಣರತ್ನೆ(30, 45 ಎಸೆತ, 3 ಬೌಂಡರಿ)ವಿಕೆಟನ್ನು ಕಬಳಿಸಿ ಮೊದಲ ವಿಕೆಟ್ ಜೊತೆಯಾಟಕ್ಕೆ ನಬಿ ಬ್ರೇಕ್ ಹಾಕಿದರು.

ಕುಸಾಲ್ ಪೆರೇರರೊಂದಿಗೆ ಇನಿಂಗ್ಸ್ ಆರಂಭಿಸಿದ ಕರುಣರತ್ನೆ 13.1 ಓವರ್‌ಗಳಲ್ಲಿ 92 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಭಾರೀ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡ ಕೆಲವೇ ನಿಮಿಷಗಳ ಮೊದಲು ಲಂಕೆಯ ಪರ ಗರಿಷ್ಠ ಸ್ಕೋರ್ ಗಳಿಸಿದ ಪೆರೇರ(78, 81 ಎಸೆತ, 8 ಬೌಂಡರಿ)ರಿವರ್ಸ್ ಸ್ವೀಪ್‌ಗೆ ಯತ್ನಿಸಿ ಸ್ಪಿನ್ನರ್ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಕೆಲವು ಗಂಟೆಗಳ ಬಳಿಕ ಮತ್ತೆ ಪಂದ್ಯ ಆರಂಭವಾದಾಗ ಪಂದ್ಯವನ್ನು 41 ಓವರ್‌ಗೆ ಕಡಿತಗೊಳಿಸಲಾಯಿತು. ಲಕ್ಮಲ್ ಔಟಾಗದೆ 15 ರನ್ ಗಳಿಸಿ ಲಂಕೆಯ ಮೊತ್ತವನ್ನು 200ರ ಗಡಿ ದಾಟಿಸಿದರು.

ಅಫ್ಘಾನ್‌ನ ಪರ ಮುಹಮ್ಮದ್ ನಬಿ(4-30)ಯಶಸ್ವಿ ಬೌಲರ್ ಎನಿಸಿಕೊಂಡರು. ರಶೀದ್ ಖಾನ್(2-17) ಹಾಗೂ ಝದ್ರಾನ್(2-34) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News