ಪಾಕಿಸ್ತಾನ-ಶ್ರೀಲಂಕಾ ವಿಶ್ವಕಪ್ ಪಂದ್ಯ ಮಳೆಗಾಹುತಿ
ಬ್ರಿಸ್ಟಾಲ್, ಜೂ.7: ಪಾಕಿಸ್ತಾನ ಹಾಗೂ ಶ್ರೀಲಂಕಾ ಮಧ್ಯೆ ಶುಕ್ರವಾರ ಇಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿದೆ.
ಮಳೆ ಹಾಗೂ ತೇವಾಂಶವಿರುವ ಹೊರಾಂಗಣದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಪಡಿಸಲು ಅಂಪೈರ್‌ಗಳು ನಿರ್ಧರಿಸಿದರು. ಪಂದ್ಯ ರದ್ದುಗೊಂಡ ಕಾರಣ ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ಶ್ರೀಲಂಕಾ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಪಾಕಿಸ್ತಾನ 3 ಪಂದ್ಯಗಳಲ್ಲಿ ಮೂರಂಕವನ್ನು ಪಡೆದಿದೆ. ಆದರೆ,ಶ್ರೀಲಂಕಾ ಉತ್ತಮ ರನ್‌ರೇಟ್ ಹೊಂದಿದೆ.
ಪಾಕಿಸ್ತಾನ ಹಾಗೂ ಶ್ರೀಲಂಕಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೋತ ಬಳಿಕ 2ನೇ ಪಂದ್ಯದಲ್ಲಿ ಜಯ ಸಾಧಿಸಿವೆ. ಪಾಕ್ ತಂಡ ವಿಂಡೀಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತ ಬಳಿಕ ಇಂಗ್ಲೆಂಡ್ ವಿರುದ್ಧ ಸೋಮವಾರ 14 ರನ್‌ಗಳ ಜಯ ದಾಖಲಿಸಿತ್ತು.
ಶ್ರೀಲಂಕಾ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಪಂದ್ಯವನ್ನು 10 ವಿಕೆಟ್‌ಗಳಿಂದ ಸೋತ ಬಳಿಕ ಮಳೆ ಬಾಧಿತ ಅಫ್ಘಾನಿಸ್ತಾನ ವಿರುದ್ದ ಪಂದ್ಯವನ್ನು 34 ರನ್‌ಗಳಿಂದ ಗೆದ್ದುಕೊಂಡಿತ್ತು.
ಎಲ್ಲ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಅಗ್ರ-4 ತಂಡಗಳು ಸೆಮಿ ಫೈನಲ್‌ಗೆ ಪ್ರವೇಶಿಸಲಿವೆ.