ಪಕ್ಷದ ನಾಯಕಿ ಹುದ್ದೆಗೆ ಬ್ರಿಟನ್ ಪ್ರಧಾನಿ ರಾಜೀನಾಮೆ

Update: 2019-06-07 16:49 GMT

ಲಂಡನ್, ಜೂ. 7: ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಶುಕ್ರವಾರ ಕನ್ಸರ್ವೇಟಿವ್ ಪಕ್ಷದ ನಾಯಕಿಯ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉತ್ತರಾಧಿಕಾರಿಗಾಗಿ ಈತ ತುರುಸಿನ ಸ್ಪರ್ಧೆ ನಡೆಯುತ್ತಿದೆ.

ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾಗಿರುವುದಕ್ಕಾಗಿ ತೆರೇಸಾ ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕೆ ನೂತನ ಮುಖ್ಯಸ್ಥರ ಆಯ್ಕೆಯಾಗುವವರೆಗೆ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಜುಲೈ ಕೊನೆಯ ವೇಳೆಗೆ ಪಕ್ಷದ ಮುಖ್ಯಸ್ಥರ ಆಯ್ಕೆ ನಡೆಯುವ ಸಾಧ್ಯತೆಯಿದೆ. ಆದಾಗ್ಯೂ, ಬ್ರೆಕ್ಸಿಟ್ ವಿಷಯದಲ್ಲಿ ಅವರು ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ.

ಅಕ್ಟೋಬರ್ 31ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ವಿಧ್ಯುಕ್ತವಾಗಿ ಬೇರ್ಪಡುವುದು ಈಗಾಗಲೇ ನಿಗದಿಯಾಗಿದೆ. ಆ ವೇಳೆಗೆ, ನೂತನ ಪ್ರಧಾನಿಯು ಹೊಸ ಒಪ್ಪಂದದೊಂದಿಗೆ ಬ್ರೆಕ್ಸಿಟನ್ನು ಪೂರ್ಣಗೊಳಿಸಬೇಕಾಗಿದೆ.

 ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕೇ ಬೇಡವೇ ಎಂಬ ಬಗ್ಗೆ ಬ್ರಿಟನ್‌ನಲ್ಲಿ 2016ರ ಜೂನ್‌ನಲ್ಲಿ ಜನಮತಗಣನೆ ನಡೆದು, ಹೊರಬರಬೇಕು ಎಂಬುದಾಗಿ ಜನರು ತೀರ್ಪು ನೀಡಿದ ಬಳಿಕ, ತೆರೇಸಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಮೂರು ವರ್ಷಗಳ ಅವಧಿಯನ್ನು ಅವರು ಸುಗಮ ಬ್ರೆಕ್ಸಿಟ್‌ಗಾಗಿಯೇ ಕಳೆದಿದ್ದಾರೆ. ಉತ್ತಮ ಕರಾರಿನಿಂದ ಕೂಡಿದ ಬ್ರೆಕ್ಸಿಟ್ ಸಾಧಿಸುವುದಕ್ಕಾಗಿ ಬ್ರೆಕ್ಸಿಟ್ ಗಡುವನ್ನು ಅವರು ಎರಡು ಬಾರಿ ವಿಸ್ತರಿಸಿದ್ದಾರೆ.

ಆದರೆ, ಕಳೆದ ತಿಂಗಳು ಸಂಸತ್ತಿನಲ್ಲಿ ಮಾಡಿದ ಕಣ್ಣೀರ ಭಾಷಣದಲ್ಲಿ, ಕೊನೆಗೂ ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ತಿಂಗಳುಗಳ ಅವಧಿಯ ರಾಜಕೀಯ ಸಂಘರ್ಷವೊಂದು ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News