ತಲೆಗೆ ಚೆಂಡಿನ ಏಟು: ಆಸ್ಪತ್ರೆಗೆ ಸೇರಿದ ಭಾರತ ಮೂಲದ ನೆಟ್ ಬೌಲರ್

Update: 2019-06-08 13:48 GMT

ಲಂಡನ್, ಜೂ.8: ಭಾರತ ವಿರುದ್ಧ ವಿಶ್ವಕಪ್‌ಗೆ ಮುನ್ನಾದಿನವಾದ ಶನಿವಾರ ಇಲ್ಲಿ ಅಭ್ಯಾಸ ನಡೆಸುತ್ತಿದ್ದ ಡೇವಿಡ್ ವಾರ್ನರ್ ಅವರ ಬ್ಯಾಟ್‌ನಿಂದ ಸಿಡಿದ ಚೆಂಡು ಭಾರತ ಮೂಲದ ನೆಟ್ ಬೌಲರ್‌ನೊಬ್ಬನ ತಲೆಗೆ ಅಪ್ಪಳಿಸಿದ ಪರಿಣಾಮ ಆತಂಕಕ್ಕೀಡಾದ ಆಸ್ಟ್ರೇಲಿಯ ತಂಡ ತನ್ನ ಅಭ್ಯಾಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಭಾರತ ಮೂಲದ ಬ್ರಿಟಷ್ ವೇಗದ ಬೌಲರ್ ಜೈ ಕಿಶನ್ ಅವರು ವಾರ್ನರ್ ಹೊಡೆದ ಚೆಂಡನ್ನು ತಡೆಯಲು ಯತ್ನಿಸಿದಾಗ ಚೆಂಡು ಅವರ ತಲೆಗೆ ಅಪ್ಪಳಿಸಿದೆ. ಚೆಂಡು ತಲೆಗೆ ಬಡಿದ ತಕ್ಷಣ ನೋವಿನಿಂದ ಚೀರಿದ ಕಿಶನ್ ಬಳಿಕ ಕುಸಿದು ಬಿದ್ದರು. ವೈದ್ಯಕೀಯ ತಂಡ ತಕ್ಷಣವೇ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿತು. ಆಟಗಾರ ಮಾತನಾಡಲು ಆರಂಭಿಸಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು. ಆಸ್ಟ್ರೇಲಿಯದ ತಂಡದ ಸಹಾಯಕ ಸಿಬ್ಬಂದಿ ಹಾಗೂ ಸ್ಥಳೀಯ ಸಿಬ್ಬಂದಿ ಕಿಶನ್‌ರನ್ನು ಸ್ಟ್ರಚರ್‌ನಿಂದ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿ ಆ್ಯಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.

 ಕಿಶನ್ ತಲೆಗೆ ಚೆಂಡಿನ ಪೆಟ್ಟು ಬಿದ್ದ ಕಾರಣ ಕನಿಷ್ಠ 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿರುತ್ತಾರೆ. ಕಿಶನ್‌ರನ್ನು ಮುನ್ನಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಿಶನ್ ಲವಲವಿಕೆಯಿಂದ ಇದ್ದಾರೆ ಎಂದು ಐಸಿಸಿ ಮ್ಯಾನೇಜರ್ ಮೈಕಲ್ ಗಿಬ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News