ವಿಶ್ವಕಪ್: ಶಾಕಿಬ್ ಶತಕ ವ್ಯರ್ಥ, ಬಾಂಗ್ಲಾಕ್ಕೆ ಹೀನಾಯ ಸೋಲು

Update: 2019-06-08 17:37 GMT

ಕಾರ್ಡಿಫ್, ಜೂ.8: ಆತಿಥೇಯ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಶನಿವಾರ ಇಲ್ಲಿ ನಡೆದ ವಿಶ್ವಕಪ್‌ನ 12ನೇ ಪಂದ್ಯದಲ್ಲಿ 106 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

 ಗೆಲ್ಲಲು 387 ರನ್ ಸವಾಲು ಪಡೆದ ಬಾಂಗ್ಲಾದೇಶ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಗಳಿಸಿದ 8ನೇ ಶತಕದ(121 ರನ್, 119 ಎಸೆತ, 12 ಬೌಂಡರಿ, 1 ಸಿಕ್ಸರ್)ಹೊರತಾಗಿಯೂ 48.5 ಓವರ್‌ಗಳಲ್ಲಿ 280 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿದೆ.

ತಲಾ ಮೂರು ವಿಕೆಟ್‌ಗಳನ್ನು ಪಡೆದ ಬೆನ್ ಸ್ಟೋಕ್ಸ್(3-23) ಹಾಗೂ ಅರ್ಚರ್(3-29), ಎರಡು ವಿಕೆಟ್ ಪಡೆದ ಪ್ಲಂಕೆಟ್(2-52)ಬಾಂಗ್ಲಾವನ್ನು 280 ರನ್‌ಗೆ ನಿಯಂತ್ರಿಸಿದರು. ಈ ಗೆಲುವಿನ ಮೂಲಕ ಇಂಗ್ಲೆಂಡ್ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 2ನೇ ಜಯ ಸಾಧಿಸಿ ಅಂಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಆರಂಭಿಕ ಆಟಗಾರ ಇಕ್ಬಾಲ್(19)ಅವರೊಂದಿಗೆ 2ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದ ಶಾಕಿಬ್ ವಿಕೆಟ್‌ಕೀಪರ್ ಮುಶ್ಫಿಕುರ್ರಹೀಂ(44, 50 ಎಸೆತ, 2 ಬೌಂಡರಿ)ಅವರೊಂದಿಗೆ 3ನೇ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿದರು. ರಹೀಂ ಔಟಾದ ಬಳಿಕ ಮಹ್ಮೂದುಲ್ಲಾರೊಂದಿಗೆ 5ನೇ ವಿಕೆಟ್‌ಗೆ 49 ರನ್ ಸೇರಿಸಿದ ಶಾಕಿಬ್ 39.3ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡಾದರು. ಶಾಕಿಬ್ ಔಟಾಗುವುದರೊಂದಿಗೆ ಬಾಂಗ್ಲಾದ ಪ್ರತಿರೋಧ ಕಡಿಮೆಯಾಯಿತು.

ಇಂಗ್ಲೆಂಡ್‌ನ ಪರ ಬೆನ್ ಸ್ಟೋಕ್ಸ್(3-20)ಯಶಸ್ವಿ ಬೌಲರ್ ಎನಿಸಿಕೊಂಡರು. ಮಾರ್ಕ್ ವುಡ್(2-40)2 ವಿಕೆಟ್ ಪಡೆದರು. ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ಆರಂಭಿಕ ಆಟಗಾರ ಜೇಸನ್ ರಾಯ್ ಸಿಡಿಸಿದ ಭರ್ಜರಿ ಶತಕದ(153, 121 ಎಸೆತ, 14 ಬೌಂಡರಿ, 5 ಸಿಕ್ಸರ್)ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 386 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News