ಮಳೆಗೆ ಕೊಚ್ಚಿಹೋದ ಬಾಂಗ್ಲಾದೇಶ-ಶ್ರೀಲಂಕಾ ವಿಶ್ವಕಪ್ ಪಂದ್ಯ

Update: 2019-06-12 05:32 GMT

ಬ್ರಿಸ್ಟ್ಟಲ್, ಜೂ.11: ಬಾಂಗ್ಲಾದೇಶ ಹಾಗೂ ಶ್ರೀಲಂಕಾದ ನಡುವೆ ಮಂಗಳವಾರ ಇಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್‌ನ 16ನೇ ಪಂದ್ಯ ಭಾರೀ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ.

ಬ್ರಿಸ್ಟ್ಟಲ್‌ನಲ್ಲಿ ಸತತ ಎರಡನೇ ಬಾರಿ ವಿಶ್ವಕಪ್ ಪಂದ್ಯವೊಂದು ಒಂದೂ ಎಸೆತ ಕಾಣದೇ ರದ್ದಾಗಿದೆ. ಶ್ರೀಲಂಕಾ ಹಾಗೂ ಪಾಕ್ ನಡುವೆ ಜೂ.7ರಂದು ಬ್ರಿಸ್ಟ್ಟಲ್‌ನಲ್ಲಿ ನಡೆಯಬೇಕಾಗಿದ್ದ ಗ್ರೂಪ್ ಪಂದ್ಯ ಕೂಡ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಜೂ.1 ರಂದು ಇಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ವರ್ಷದ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬಾರಿ ಟಾಸ್ ಚಿಮ್ಮಿಸಲು ಅವಕಾಶ ಸಿಗದೆ ಪಂದ್ಯವೊಂದು ರದ್ದಾಗಿದೆ. ಈಗ ನಡೆಯುತ್ತಿರುವ ವಿಶ್ವಕಪ್ ಅತ್ಯಂತ ಹೆಚ್ಚು ರದ್ದುಗೊಂಡ ಪಂದ್ಯಗಳಿಗೆ ಸಾಕ್ಷಿಯಾಗಿದೆ.

ಸತತ ಎರಡನೇ ದಿನವೂ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ದಕ್ಷಿಣ ಆಫ್ರಿಕ ಹಾಗೂ ವೆಸ್ಟ್‌ಇಂಡೀಸ್ ನಡುವೆ ಸೋಮವಾರದ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು. ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದ ನಡುವೆ ಜೂ.4 ರಂದು ನಡೆದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದರೂ ಅಂತಿಮವಾಗಿ ಶ್ರೀಲಂಕಾ ಡಿ/ಎಲ್ ನಿಯಮದ ಪ್ರಕಾರ 34 ರನ್‌ಗಳಿಂದ ಜಯ ಸಾಧಿಸಿತ್ತು.

ಇಂದಿನ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಬಾಂಗ್ಲಾ ಹಾಗೂ ಶ್ರೀಲಂಕಾ ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ರಾತ್ರಿ ಹಾಗೂ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 10:30ಕ್ಕೆ ವಿಳಂಬವಾಗಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಮಳೆ ನಿರಂತರವಾಗಿ ಸುರಿದ ಕಾರಣ ಅಂಪೈರ್‌ಗಳು ಸತತವಾಗಿ ಪಿಚ್‌ನ್ನು ಪರೀಕ್ಷಿಸಿ ಅಂತಿಮವಾಗಿ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

ಶ್ರೀಲಂಕಾ ಶನಿವಾರ ದಿ ಓವಲ್‌ನಲ್ಲಿ ಆಸ್ಟ್ರೇಲಿಯದ ಸವಾಲು ಎದುರಿಸಲಿದೆ. ಬಾಂಗ್ಲಾದೇಶ ಸುಮಾರು ಒಂದು ವಾರದ ಬಳಿಕ ಜೂ.17ರಂದು ಟೌಂಟನ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News