ಪರಮಾಣು ಬಾಂಬ್‌ಗಳ ಗಾತ್ರ ಹಿಗ್ಗಿಸುತ್ತಿರುವ ಭಾರತ, ಚೀನಾ, ಪಾಕ್

Update: 2019-06-17 17:47 GMT

   ಸ್ಟಾಕ್‌ಹೋಮ್ (ಸ್ವೀಡನ್), ಜೂ. 17: ಜಗತ್ತಿನಲ್ಲಿರುವ ಪರಮಾಣು ಸಿಡಿತಲೆಗಳ ಒಟ್ಟು ಸಂಖ್ಯೆ ಕಳೆದ ವರ್ಷದಲ್ಲಿ ಕಡಿಮೆಯಾಗಿದೆ, ಆದರೆ ದೇಶಗಳು ತಮ್ಮ ಆಯುಧಗಳನ್ನು ಆಧುನೀಕರಿಸುತ್ತಿವೆ ಎಂದು ಸೋಮವಾರ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.

2019ರ ಆರಂಭದಲ್ಲಿ, ಅಮೆರಿಕ, ರಶ್ಯ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಗಳು ಒಟ್ಟು ಸುಮಾರು 13,865 ಪರಮಾಣು ಅಸ್ತ್ರಗಳನ್ನು ಹೊಂದಿದ್ದವು ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ) ನೂತನ ವರದಿಯೊಂದು ಅಂದಾಜಿಸಿದೆ.

2018ರ ಆರಂಭಕ್ಕೆ ಹೋಲಿಸಿದರೆ, ಈ ಸಂಖ್ಯೆಯು 600ರಷ್ಟು ಕಡಿಮೆಯಾಗಿದೆ.

ಆದಾಗ್ಯೂ, ಎಲ್ಲ ಪರಮಾಣು ಶಸ್ತ್ರ ಹೊಂದಿರುವ ದೇಶಗಳು ತಮ್ಮ ಶಸ್ತ್ರಗಳನ್ನು ಆಧುನೀಕರಿಸುತ್ತಿವೆ ಹಾಗೂ ಚೀನಾ, ಭಾರತ ಮತ್ತು ಪಾಕಿಸ್ತಾನಗಳು ಕೂಡ ತಮ್ಮ ಪರಮಾಣು ಬಾಂಬ್‌ಗಳ ಗಾತ್ರವನ್ನು ಹಿಗ್ಗಿಸುತ್ತಿವೆ.

‘‘ಜಗತ್ತಿನ ಪರಮಾಣು ಶಸ್ತ್ರಗಳ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ, ಆದರೆ, ಹೊಸ ಮಾದರಿಯ ಶಸ್ತ್ರಗಳನ್ನು ನಾವು ನೋಡುತ್ತಿದ್ದೇವೆ’’ ಎಂದು ಸಿಪ್ರಿ ಪರಮಾಣು ಶಸ್ತ್ರಗಳ ನಿಯಂತ್ರಣ ಕಾರ್ಯಕ್ರಮದ ನಿರ್ದೇಶಕ ಹಾಗೂ ವರದಿಯ ಲೇಖಕರಲ್ಲಿ ಓರ್ವರಾಗಿರುವ ಶಾನನ್ ಕೈಲ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಅಮೆರಿಕ ಮತ್ತು ರಶ್ಯಗಳು ತಮ್ಮ ಪರಮಾಣು ಶಸ್ತ್ರಗಳ ಸಂಖ್ಯೆಯಲ್ಲಿ ಕಡಿತ ಮಾಡಿರುವುದು ಇದಕ್ಕೆ ಕಾರಣ. ಆದಾಗ್ಯೂ, ಈ ಎರಡು ದೇಶಗಳ ಪರಮಾಣು ಬಾಂಬ್‌ಗಳ ಪ್ರಮಾಣ ಈಗಲೂ ಜಗತ್ತಿನ ಪರಮಾಣು ಶಸ್ತ್ರಗಳ ಪೈಕಿ 90 ಶೇಕಡದಷ್ಟಿದೆ.

ರಶ್ಯ-ಅಮೆರಿಕ ಒಪ್ಪಂದ ಕಾರಣ

‘ನ್ಯೂ ಸ್ಟಾರ್ಟ್’ ಒಪ್ಪಂದದ ತಮ್ಮ ಬದ್ಧತೆಗಳನ್ನು ಈ ದೇಶಗಳು ಪೂರೈಸುತ್ತಿರುವುದು ಪರಮಾಣು ಶಸ್ತ್ರಗಳ ಸಂಖ್ಯೆಯಲ್ಲಿ ಕಡಿಮೆಯಾಗಲು ಇನ್ನೊಂದು ಕಾರಣವಾಗಿದೆ. 2010ರಲ್ಲಿ ರಶ್ಯ ಮತ್ತು ಅಮೆರಿಕಗಳು ಸಹಿ ಹಾಕಿರುವ ಈ ಒಪ್ಪಂದವು ಪರಮಾಣು ಬಾಂಬ್‌ಗಳ ಗರಿಷ್ಠ ಸಂಖ್ಯೆಯ ಮೇಲೆ ಮಿತಿ ಹೇರುತ್ತದೆ ಹಾಗೂ ಶೀತಲ ಸಮರ ಕಾಲದ ಹಳೆಯ ಪರಮಾಣು ಸಿಡಿತಲೆಗಳನ್ನು ನಾಶಪಡಿಸಬೇಕು ಎಂದು ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News