ಖಶೋಗಿ ಹತ್ಯೆ: ವಿಶ್ವಸಂಸ್ಥೆ ವರದಿಯಿಂದ ಸೌದಿ ಮೇಲೆ ಮತ್ತೆ ಜಾಗತಿಕ ಒತ್ತಡ

Update: 2019-06-21 17:11 GMT

  ರಿಯಾದ್, ಜೂ. 21: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯಿಂದ ಉದ್ಭವಿಸಿದ ಹಗರಣವನ್ನು ಮರೆತು ಮುಂದಕ್ಕೆ ಹೋಗುವ ಪ್ರಯತ್ನವನ್ನು ಸೌದಿ ಅರೇಬಿಯ ಮಾಡಿತ್ತು. ಆದರೆ, ವಿಶ್ವಸಂಸ್ಥೆಯ ತನಿಖಾಗಾರರೊಬ್ಬರು ಖಶೋಗಿ ಹತ್ಯೆಯ ಹೊಣೆಯನ್ನು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮೇಲೆ ಹೊರಿಸಿದ ಬಳಿಕ ಸೌದಿ ಅರೇಬಿಯ ಮತ್ತೆ ಜಾಗತಿಕ ಒತ್ತಡಕ್ಕೆ ಒಳಗಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಅಕ್ಟೋಬರ್ 2ರಂದು ನಡೆದ ಖಶೋಗಿ ಹತ್ಯೆಗೆ ಸಂಬಂಧಿಸಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಇನ್ನಷ್ಟು ತನಿಖೆ ನಡೆಸಲು ಹಾಗೂ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಬೇಕಾಗುವಷ್ಟು ‘ವಿಶ್ವಾಸಾರ್ಹ ಪುರಾವೆ’ಯಿದೆ ಎಂಬುದಾಗಿ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವಸಂಸ್ಥೆಯ ವಿಶೇಷ ಅಧಿಕಾರಿ ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ.

 ಹತ್ಯೆ ಸೃಷ್ಟಿಸಿದ ಹಗರಣದಿಂದ ಸೌದಿ ಅರೇಬಿಯದ ವಸ್ತುತಃ ಆಡಳಿತಗಾರ ಮುಹಮ್ಮದ್ ಬಿನ್ ಸಲ್ಮಾನ್ ಹೊರಬರುತ್ತಿದ್ದಾರೆ ಎಂದು ಎಲ್ಲರೂ ಭಾವಿಸುತ್ತಿದ್ದಾಗ, ಜಮಾಲ್ ಹತ್ಯೆಯ ವಿವರಗಳನ್ನೊಳಗೊಂಡ ದಾಖಲೆಗಳು ಹೊರಬಂದಿರುವುದು ಸೌದಿ ಅರೇಬಿಯದ ಆಡಳಿತವನ್ನು ಮತ್ತೆ ಜಾಗತಿಕ ಕಟಕಟೆಯಲ್ಲಿ ತಂದು ನಿಲ್ಲಿಸಿದೆ.

ಸೌದಿ ಅರೇಬಿಯದ 15 ಮಂದಿ ಬೇಹುಗಾರಿಕಾ ಅಧಿಕಾರಿಗಳ ತಂಡವೊಂದು ಅಕ್ಟೋಬರ್ 2ರಂದು ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಮದುವೆ ದಾಖಲೆ ಪತ್ರಗಳನ್ನು ಪಡೆಯಲು ಬಂದಿದ್ದ ಖಶೋಗಿಯನ್ನು ಬರ್ಬರವಾಗಿ ಹತ್ಯೆಗೈದಿತ್ತು. ಅವರ ಮೃತದೇಹ ಈವರೆಗೂ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News