ಶಮಿ ಹ್ಯಾಟ್ರಿಕ್‌ ಹಿಂದೆ ಯಾರಿದ್ದಾರೆ ಗೊತ್ತೇ?

Update: 2019-06-23 08:53 GMT

ಸೌಥಾಂಪ್ಟನ್, ಜೂ.23: ಇಲ್ಲಿ ಶನಿವಾರ ರಾತ್ರಿ ನಡೆದ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಮುಹಮ್ಮದ್ ಶಮಿ ಕೊನೆಯ ಓವರ್‌ನಲ್ಲಿ ನಡೆಸಿದ ಮ್ಯಾಜಿಕ್ ನಿಂದ ಭಾರತಕ್ಕೆ ಅಫ್ಘಾನಿಸ್ತಾನ ವಿರುದ್ಧ 11ರನ್‌ಗಳ ರೋಚಕ ಗೆಲುವು ದಾಖಲಿಸಲು ಸಾಧ್ಯವಾಗಿತ್ತು.

ವಿಶ್ವಕಪ್‌ನಲ್ಲಿ ದುರ್ಬಲ ತಂಡವೆಂದೇ ಬಿಂಬಿತವಾಗಿರುವ ಅಫ್ಘಾನಿಸ್ತಾನ ವಿರುದ್ಧ ಸೋಲಿನ ದವಡೆಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿ ಕೊನೆ ಗಳಿಗೆಯಲ್ಲಿ ಸಿಕ್ಕಿದ್ದು ಮುಹಮ್ಮದ್ ಶಮಿಗೆ. ಆದರೆ ಮುಹಮ್ಮದ್ ಶಮಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಉಡಾಯಿಸುವ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟರು.

ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 16 ರನ್‌ಗಳ ಆವಶ್ಯಕತೆ ಇತ್ತು. ಮುಹಮ್ಮದ್ ಶಮಿ ಕೊನೆಯ ಓವರ್‌ನಲ್ಲಿ ದಾಳಿಗಿಳಿದಾಗ ಭಾರತೀಯ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಕ್ರೀಸ್‌ನಲ್ಲಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನಕ್ಕೆ ಗೆಲುವು ದೊರೆಯುವ ಎಲ್ಲ ಸಾಧ್ಯತೆ ಇತ್ತು.

ಒತ್ತಡದ ಪರಿಸ್ಥಿತಿಯಲ್ಲಿ ಅನುಭವಿ ಬೌಲರ್‌ಗಳು ಕೆಲವೊಮ್ಮೆ ಎಡವುತ್ತಾರೆ. ಆದರೆ ಶಮಿ ಮಾತ್ರ ತನ್ನ ಅನುಭವದ ಮೂಲಕ ಅಫ್ಘಾನಿಸ್ತಾನದ ದಾಂಡಿಗರನ್ನು ಕಟ್ಟಿ ಹಾಕಿದರು.

 ಶಮಿ ಅವರ ಕೊನೆಯ ಓವರ್‌ನ ಮೊದಲ ಎಸೆತವನ್ನು ನಬಿ ಬೌಂಡರಿಗಟ್ಟಿ ಅರ್ಧಶತಕ ಪೂರ್ಣಗೊಳಿಸರು. ಮುಂದೆ 5 ಎಸೆತಗಳಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 12 ರನ್ ಬೇಕಾಗಿತ್ತು. ನಬಿ ಅದೇ ಪ್ರದರ್ಶನವನ್ನು ಮುಂದುವರಿಸುವ ಯೋಜನೆಯಲ್ಲಿದ್ದರು. ಅಫ್ಘಾನಿಸ್ತಾನಕ್ಕೆ ಹ್ಯಾಟ್ರಿಕ್ ಬೌಂಡರಿಯಿಂದ ಗೆಲುವು ಸುಲಭವಾಗುತ್ತಿತ್ತು,

ಈ ಹಂತದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಧೋನಿ ಅವರು ಶಮಿ ಬಳಿ ಓಡಿ ಬಂದು ಅಫ್ಘಾನಿಸ್ತಾನದ ದಾಂಡಿಗರನ್ನು ಕಟ್ಟಿ ಹಾಕಲು ಟಿಪ್ಸ್ ನೀಡಿದ್ದರು.

  ‘ಇನ್ನೂ ಬೌಂಡರಿ ಹೋಗುವ ಸಾಧ್ಯತೆ ಇದೆ. ಯಾರ್ಕರ್ ಹಾಕು. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು , ಕಾರ್ಯತಂತ್ರವನ್ನು ಕಾರ್ಯಗತಗೊಳಿಸು . ಹ್ಯಾಟ್ರಿಕ್ ಪಡೆಯುವ ಉತ್ತಮ ಅವಕಾಶ ನಿನ್ನ ಮುಂದೆ ಇದೆ ’’ಎಂದು ಸಲಹೆ ನೀಡಿದ್ದರು ಎನ್ನುವ ವಿಚಾರವನ್ನು ಶಮಿ ಪಂದ್ಯದ ಬಳಿಕ ಬಹಿರಂಗಗೊಳಿಸಿದ್ದಾರೆ.

 ಎರಡನೇ ಎಸೆತವನ್ನು ನಬಿ ರಕ್ಷಣಾತ್ಮಕವಾಗಿ ಆಡಿದರು. ಆದರೆ ಸಿಂಗಲ್ ತೆಗೆಯುವ ಸಾಹಸಕ್ಕೆ ನಬಿ ಮುಂದಾಗಲಿಲ್ಲ. ಮೂರನೇ ಎಸೆತವನ್ನು ನಿರೀಕ್ಷೆಯಂತೆ ನಬಿ ಬೌಂಡರಿ ಕಡೆಗೆ ತಳ್ಳಿದರು. ಆದರೆ ಚೆಂಡು ಬೌಂಡರಿ ಗೆರೆಯತ್ತ ಸಾಗುವ ಮೊದಲೇ ಹಾರ್ದಿಕ್ ಪಾಂಡ್ಯ ಕ್ಯಾಚ್ ತೆಗೆದುಕೊಂಡು ಪಂದ್ಯಕ್ಕೆ ಹೊಸ ತಿರುವು ನೀಡಿದರು. ಅಫ್ಘಾನಿಸ್ತಾನದ 8ನೇ ವಿಕೆಟ್ ಉರುಳುವುದರೊಂದಿಗೆ ಹೋರಾಟ ಬಹುತೇಕ ಅಂತ್ಯವಾಗಿತ್ತು. ಬಳಿಕ ಕ್ರೀಸ್‌ಗೆ ಆಗಮಿಸಿದ ಅಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರಹ್ಮಾನ್‌ನ್ನು ಸತತ ಎಸೆತಗಳಲ್ಲಿ ಬಂದ ದಾರಿಯಲ್ಲೇ ಶಮಿ ಹಿಂದಕ್ಕೆ ಕಳುಹಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

   ಈ ವಿಶ್ವಕಪ್‌ನಲ್ಲಿ ಮೊದಲ ಬಾರಿ ಅವಕಾಶ ಪಡೆದ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದರು. ಅವರ ಪ್ರದರ್ಶನ 9.5-1-40-4. ಈ ಮೊದಲು ಭಾಾರತದ ಚೇತನ್ ಶರ್ಮಾ 1987ರಲ್ಲಿ ಮೊದಲ ಹ್ಯಾಟ್ರಿಕ್ ಪಡೆದಿದ್ದರು. ಆ ಬಳಿಕ 32 ವರ್ಷಗಳಲ್ಲಿ ಭಾರತದ ಪರ ಇನ್ನೊಂದು ಹ್ಯಾಟ್ರಿಕ್ ದಾಖಲೆ ನಿರ್ಮಾಣವಾಗಿದೆ. ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಹತ್ತನೇ ಬೌಲರ್ ಎನಿಸಿಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದವರು

1987: ಚೇತನ್ ಶರ್ಮ(ಭಾರತ)

1999: ಸಕ್ಲೈನ್ ಮುಸ್ತಾಕ್(ಪಾಕಿಸ್ತಾನ)

2003: ಚಮಿಂಡ ವಾಸ್(ಶ್ರೀಲಂಕಾ)

2003: ಬ್ರೆಟ್ ಲೀ (ಆಸ್ಟ್ರೇಲಿಯ)

2007: ಲಸಿತ್ ಮಾಲಿಂಗ(ಶ್ರೀಲಂಕಾ)

2011: ಕೇಮರ್ ರೂಚ್(ವೆಸ್ಟ್‌ಇಂಡೀಸ್)

2015: ಸ್ಟೀವನ್ ಫಿನ್ (ಇಂಗ್ಲೆಂಡ್)

2015: ಜೆ.ಪಿ.ಡುಮಿನಿ(ದ. ಆಫ್ರಿಕ)

2019: ಮುಹಮ್ಮದ್ ಶಮಿ(ಭಾರತ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News