ಸೇನಾ ಮುಖ್ಯಸ್ಥನನ್ನು ಗುಂಡಿಟ್ಟು ಕೊಂದ ಭದ್ರತಾ ಸಿಬ್ಬಂದಿ

Update: 2019-06-23 15:22 GMT

ಅದ್ದಿಸ್ ಅಬಡ, ಜೂ.23: ಇಥಿಯೋಪಿಯದ ಅಮ್ಹರ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಸೇನಾ ಕಾರ್ಯಾಚರಣೆ ನಡೆಸಿದ ಸೇನಾ ಮುಖ್ಯಸ್ಥನನ್ನು ಆತನ ಭದ್ರತಾ ಸಿಬ್ಬಂದಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಪ್ರಧಾನ ಮಂತ್ರಿಗಳ ಕಚೇರಿ ರವಿವಾರ ತಿಳಿಸಿದೆ.

 ಅಮ್ಹರದ ಅಧ್ಯಕ್ಷ ಅಂಬಚ್ಯೂವ್ ಮೆಕೊನೆನ್ ಮತ್ತು ಅವರ ಸಲಹೆಗಾರನನ್ನೂ ಶನಿವಾರ ಅಮ್ಹರದ ರಾಜಧಾನಿ ಬಹಿರ್ ದರ್‌ನಲ್ಲಿ ಪ್ರತ್ಯೇಕ ಘಟನೆಯಲ್ಲಿ ಹತ್ಯೆ ಮಾಡಲಾಗಿದೆ ಮತ್ತು ಸರಕಾರದ ಅಟರ್ನಿ ಜನರಲ್ ಅವರನ್ನು ಗಾಯಗೊಳಿಸಲಾಗಿದೆ ಎಂದು ಪ್ರಧಾನಿ ಅಬಿಯ್ ಅಹ್ಮದ್ ಅವರ ಕಚೇರಿ ತಿಳಿಸಿದೆ. ಇಥಿಯೋಪಿಯ ಪ್ರಧಾನಿ ಅಬಿಯ್ ಅವರಿಗೆ ನಿಷ್ಠರಾಗಿದ್ದ ಅಮ್ಹರ ಅಧ್ಯಕ್ಷರನ್ನು ಬಹಿರ್ ದರ್‌ನಲ್ಲಿ ಸಭೆಯ ವೇಳೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ವಿಫಲಗೊಂಡ ಸೇನಾ ಕಾರ್ಯಾಚರಣೆ ನಡೆಸುವಲ್ಲಿ ಅಮ್ಹರದ ಭದ್ರತಾ ಮುಖ್ಯಸ್ಥ ಜನರಲ್ ಅಸಮ್‌ನೂ ಸಿಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆದರೆ ಸಿಗೆ ಇರುವಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಇದೇ ರೀತಿ ಸೇನಾ ಕಾರ್ಯಾಚರಣೆ ನಡೆಸಿದ ಆರೋಪದಲ್ಲಿ ಜೈಲುಪಾಲಾಗಿದ್ದ ಅಸಮ್‌ನೂ ಕಳೆದ ವರ್ಷ ಆ್ಯಮ್ನೆಸ್ಟಿ ಮೂಲಕ ಹೊರಬಂದಿದ್ದರು. ಒಂದು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ ಅಬಿಯ್, ಆಫ್ರಿಕಾದ ಎರಡನೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಶೀಘ್ರ ಆರ್ಥಿಕ ಪ್ರಗತಿ ಹೊಂದುತ್ತಿರುವ ಇಥೊಯೋಪಿಯದಲ್ಲಿ ಅನಿರೀಕ್ಷಿತ ಸುಧಾರಣೆಗಳನ್ನು ಘೋಷಿಸಿದ್ದರು.

ದೇಶದ ಸೇನೆ ಮತ್ತು ಗುಪ್ತಚರ ಸೇವೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಂದ ಅವರಿಗೆ ಶತ್ರುಗಳೂ ಹುಟ್ಟಿಕೊಂಡಿದ್ದರು. ಇಥಿಯೋಪಿಯದ ಎರಡನೇ ಅತೀದೊಡ್ಡ ಜನಾಂಗವಾಗಿರುವ ಅಮ್ಹರದ ಜನತೆ ಇತರ ಗುಂಪುಗಳ ವಿರುದ್ಧ ಹೋರಾಡಲು ಸಿದ್ಧತೆಗಳನ್ನು ನಡೆಸುವಂತೆ ಕಳೆದ ವಾರ ಅಸಮ್‌ನೂ ಕರೆ ನೀಡಿರುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು.

ಅಧಿಕಾರಕ್ಕೆ ಏರಿದಂದಿನಿಂದ ಅಬಿಯ್, ರಾಜಕೀಯ ಖೈದಿಗಳ ಬಿಡುಗಡೆ ಮಾಡುವ ಜೊತೆಗೆ ರಾಜಕೀಯ ಪಕ್ಷಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದ್ದರು ಮತ್ತು ಮಾನವಹಕ್ಕುಗಳ ಉಲ್ಲಂಘನೆ ಮಾಡಿದ ಆರೋಪ ಹೊಂದಿರುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದ್ದರು. ಆದರೆ ದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಅವರ ಸರಕಾರ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News