ಬೆಹ್ರೆನ್‌ ಡಾರ್ಫ್, ಸ್ಟಾರ್ಕ್ ಬಿರುಗಾಳಿ ಬೌಲಿಂಗ್‌ ಗೆ ಇಂಗ್ಲೆಂಡ್ ಧೂಳಿಪಟ

Update: 2019-06-25 17:47 GMT

ಲಂಡನ್, ಜೂ.25: ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್ ಬಿರುಗಾಳಿ ವೇಗದ ಬೌಲಿಂಗ್‌ಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ತಂಡ ವಿಶ್ವಕಪ್‌ನ 32ನೇ ಲೀಗ್ ಪಂದ್ಯದಲ್ಲಿ ಚಾಂಪಿಯನ್ ಆಸ್ಟ್ರೇಲಿಯ ತಂಡದ ವಿರುದ್ಧ 64 ರನ್‌ಗಳಿಂದ ಸೋಲುಂಡಿದೆ. ಏಳು ಪಂದ್ಯಗಳಲ್ಲಿ 6ನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ ಸೆಮಿಫೈನಲ್ ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.

ನಾಯಕ ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಭರ್ಜರಿ ಆರಂಭದ ಬೆಂಬಲದಿಂದ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 285 ರನ್ ಗಳಿಸಿತು.

ಗೆಲ್ಲಲು ಕಠಿಣ ಗುರಿ ಪಡೆದ ಇಂಗ್ಲೆಂಡ್ 44.4 ಓವರ್‌ಗಳಲ್ಲಿ 221 ರನ್‌ಗೆ ಆಲೌಟಾಯಿತು. ಆರಂಭಿಕ ವೇಗದ ಬೌಲರ್ ಬೆಹ್ರೆನ್‌ಡಾರ್ಫ್ 44 ರನ್‌ಗೆ 5 ವಿಕೆಟ್ ಉಡಾಯಿಸಿದರು. ಮಿಚೆಲ್ ಸ್ಟಾರ್ಕ್ 43 ರನ್‌ಗೆ 4 ವಿಕೆಟ್‌ಗಳನ್ನು ಪಡೆದರು. ಇಂಗ್ಲೆಂಡ್‌ನ ಪರ ಆಲ್‌ರೌಂಡರ್ ಬೆನ್ ಸ್ಟೋಕ್ಸ್(89, 115 ಎಸೆತ, 8 ಬೌಂಡರಿ, 2 ಸಿಕ್ಸರ್)ಆಸ್ಟ್ರೇಲಿಯ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಬೈರ್‌ಸ್ಟೋವ್(27), ಬಟ್ಲರ್(25),ವೋಕ್ಸ್(26) ಹಾಗೂ ರಶೀದ್(25) ಎರಡಂಕೆ ಸ್ಕೋರ್ ಗಳಿಸಿದರು.

ಇನಿಂಗ್ಸ್‌ನ ಮೊದಲ ಓವರ್‌ನ 2ನೇ ಎಸೆತದಲ್ಲಿ ಆರಂಭಿಕ ಆಟಗಾರ ವಿನ್ಸಿ(0) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭಪಡೆದ ಇಂಗ್ಲೆಂಡ್ ಆ ಬಳಿಕ ಚೇತರಿಸಿಕೊಳ್ಳಲು ವಿಫಲವಾಯಿತು.

ಈನಡುವೆ ಸ್ಟೋಕ್ಸ್ 5ನೇ ವಿಕೆಟ್‌ಗೆ ಜೋಸ್ ಬಟ್ಲರ್‌ರೊಂದಿಗೆ 71 ರನ್ ಹಾಗೂ ಕ್ರಿಸ್ ವೋಕ್ಸ್‌ರೊಂದಿಗೆ 6ನೇ ವಿಕೆಟ್‌ಗೆ 53 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಯತ್ನಿಸಿದರು. ಆದರೆ, ಆಸೀಸ್‌ನ ಕರಾರುವಾಕ್ ಬೌಲಿಂಗ್‌ನೆದುರು ಸ್ಟೋಕ್ಸ್ ಪ್ರಯತ್ನ ಫಲ ನೀಡಲಿಲ್ಲ.

ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News