ಇಸ್ರೇಲ್-ಫೆಲೆಸ್ತೀನ್ ಶಾಂತಿಗಾಗಿ 50 ಬಿಲಿಯ ಡಾಲರ್ ಪರಿಹಾರ ಸೂತ್ರ

Update: 2019-06-26 17:46 GMT

ಮನಾಮ (ಬಹರೈನ್), ಜೂ. 26: ಇಸ್ರೇಲ್-ಫೆಲೆಸ್ತೀನ್ ಶಾಂತಿಗಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಮಂಗಳವಾರ 50 ಬಿಲಿಯ ಡಾಲರ್ (3.46 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಆರ್ಥಿಕ ಸೂತ್ರವೊಂದನ್ನು ಮುಂದಿಟ್ಟಿದೆ. ದಶಕಗಳ ಹಳೆಯ ಸಂಘರ್ಷವನ್ನು ಕೊನೆಗೊಳಿಸಲು, ಈ ಹೂಡಿಕೆ ಕಾರ್ಯಕ್ರಮವು ಫೆಲೆಸ್ತೀನಿಯರಿಗೆ ಪೂರ್ವಶರತ್ತಾಗಿರುತ್ತದೆ ಎಂದು ಅದು ಹೇಳಿದೆ.

ಈ ಶಾಂತಿ ಸೂತ್ರಕ್ಕೆ ಬೆಂಬಲ ಗಳಿಸುವುದಕ್ಕಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಿರಿಯ ಸಲಹೆಗಾರ ಹಾಗೂ ಅಳಿಯ ಜ್ಯಾರ್ಡ್ ಕಶ್ನರ್ ಬಹರೈನ್ ರಾಜಧಾನಿ ಮನಾಮದಲ್ಲಿ ಮಂಗಳವಾರ ಎರಡು ದಿನಗಳ ಅಂತರ್‌ರಾಷ್ಟ್ರೀಯ ಸಮಾವೇಶವೊಂದಕ್ಕೆ ಚಾಲನೆ ನೀಡಿದರು.

ಆದರೆ, ಈ ಸೂತ್ರಕ್ಕೆ ಫೆಲೆಸ್ತೀನಿಯರು ಮತ್ತು ಅರಬ್ ಜಗತ್ತಿನ ಇತರರಿಂದ ವ್ಯಾಪಕ ತಿರಸ್ಕಾರ ವ್ಯಕ್ತವಾಗಿದೆ. ಆದಾಗ್ಯೂ, ಸೌದಿ ಅರೇಬಿಯದಂಥ ಅಮೆರಿಕದ ಪ್ರಾದೇಶಿಕ ಮಿತ್ರದೇಶಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿವೆ.

‘‘ನಾವು ಈ ವಲಯವನ್ನು ಹಿಂದಿನ ಸಂಘರ್ಷಗಳ ಬಲಿಪಶು ಸ್ಥಿತಿಯಿಂದ ವ್ಯಾಪಾರ ಮತ್ತು ಅಭಿವೃದ್ಧಿಯ ಮಾದರಿ ವಲಯವಾಗಿ ಮಾರ್ಪಡಿಸಬಹುದು’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಕಶ್ನರ್ ಹೇಳಿದರು.

ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಹಾಜರಿದ್ದರು.

ಈ ಪ್ರಸ್ತಾಪದ ಬಗ್ಗೆ ಇಸ್ರೇಲ್ ಮುಕ್ತ ಮನೋಭಾವ ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಪ್ತ ಮಿತ್ರನಾಗಿದ್ದಾರೆ.

 ‘ಎರಡು-ದೇಶ ಪರಿಹಾರ’ ಏನಾಯಿತು?

‘ಎರಡು-ದೇಶ ಪರಿಹಾರ’ವನ್ನು ಟ್ರಂಪ್ ತಂಡ ಕೈಬಿಡಲು ಉದ್ದೇಶಿಸಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಇಸ್ರೇಲ್ ಮತ್ತು ಸ್ವತಂತ್ರ ಫೆಲೆಸ್ತೀನ್ ದೇಶಗಳು ಅಕ್ಕಪಕ್ಕದಲ್ಲಿರುವ ‘ಎರಡು-ದೇಶ’ ಪರಿಹಾರದ ಪರವಾಗಿ ವ್ಯಾಪಕ ಜನಾಭಿಪ್ರಾಯ ಈ ಹಿಂದೆ ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ.

ವಿಶ್ವಸಂಸ್ಥೆ ಮತ್ತು ಹೆಚ್ಚಿನ ದೇಶಗಳು ಈ ಪರಿಹಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಆದರೆ, ಟ್ರಂಪ್ ಆಡಳಿತ ಮಾತ್ರ ಇದನ್ನು ಗಣನೆಗೆ ತೆಗೆದುಕೊಳ್ಳಲು ನಿರಾಕರಿಸುತ್ತಿದೆ.

ಫೆಲೆಸ್ತೀನ್ ನಾಯಕರ ಬಹಿಷ್ಕಾರ

ಜ್ಯಾರ್ಡ್ ಕಶ್ನರ್ ಏರ್ಪಡಿಸಿರುವ ಎರಡು ದಿನಗಳ ಸಮ್ಮೇಳನವನ್ನು ಫೆಲೆಸ್ತೀನ್ ನಾಯಕರು ಬಹಿಷ್ಕರಿಸಿದ್ದಾರೆ. ಅಮೆರಿಕವು ಇಸ್ರೇಲ್ ಪರವಾಗಿದೆ ಎಂಬುದಾಗಿ ಆರೋಪಿಸಿರುವ ಅವರು, ಈ ವಿಷಯದಲ್ಲಿ ಅಮೆರಿಕದೊಂದಿಗೆ ವ್ಯವಹರಿಸಲು ನಿರಾಕರಿಸಿವೆ.

ಟ್ರಂಪ್ 2017ರಲ್ಲಿ ಅಂತರ್‌ರಾಷ್ಟ್ರೀಯ ಒಮ್ಮತವನ್ನು ಕಡೆಗಣಿಸಿ ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿದ್ದರು. ಇದು ಫೆಲೆಸ್ತೀನಿಯರು ಮತ್ತು ಇತರ ಅರಬ್ಬರನ್ನು ಕೆರಳಿಸಿದೆ.

ಆದಾಗ್ಯೂ, ಸಮ್ಮೇಳನದಲ್ಲಿ ಫೆಲೆಸ್ತೀನ್ ಮತ್ತು ಇಸ್ರೇಲ್ ಉದ್ಯಮಿಗಳು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News