ವಿಶ್ವಕಪ್: ಭಾರತಕ್ಕೆ 338 ರನ್ ಗುರಿ
ಬರ್ಮಿಂಗ್‌ಹ್ಯಾಮ್, ಜೂ.30: ಜಾನಿ ಬೈರ್‌ಸ್ಟೋವ್ ಹಾಗೂ ರಾಯ್ ಮೊದಲ ವಿಕೆಟ್‌ನಲ್ಲಿ ಗಳಿಸಿದ ಭರ್ಜರಿ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತಕ್ಕೆ ವಿಶ್ವಕಪ್‌ನ 38ನೇ ಲೀಗ್ ಪಂದ್ಯವನ್ನು ಗೆಲ್ಲಲು 338 ರನ್ ಗುರಿ ನೀಡಿದೆ.
ಬೈರ್‌ಸ್ಟೋವ್ ಶತಕ, ರಾಯ್(66) ಹಾಗೂ ಸ್ಟೋಕ್ಸ್(79) ಅರ್ಧಶತಕದ ಕೊಡುಗೆಯ ಸಹಾಯದಿಂದ ಇಂಗ್ಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ವೇಗದ ಬೌಲರ್ ಮುಹಮ್ಮದ್ ಶಮಿ(5-69)ಐದು ವಿಕೆಟ್ ಗೊಂಚಲು ಪಡೆದರು.ಜೋ ರೂಟ್(44) ಹಾಗೂ ವೋಕ್ಸ್(20) ಎರಡಂಕೆಯ ಸ್ಕೋರ್ ಗಳಿಸಿದರು.
ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಮೊರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಬೈರ್‌ಸ್ಟೋವ್ ಹಾಗೂ ರಾಯ್ ಮೊದಲ ವಿಕೆಟ್ ಜೊತೆಯಾಟದಲ್ಲಿ 160 ರನ್ ಸೇರಿಸಿದರು. ಇದು ಈ ವರ್ಷದ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ನಲ್ಲಿ ದಾಖಲಾದ ಗರಿಷ್ಟ ಜೊತೆಯಾಟವಾಗಿದೆ.
ಜೇಸನ್ ರಾಯ್(66, 57 ಎಸೆತ) ವಿಕೆಟನ್ನು ಉರುಳಿಸಿದ ಕುಲದೀಪ್ ಯಾದವ್ ಕೊನೆಗೂ ಮೊದಲ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು.
90 ಎಸೆತಗಳಲ್ಲಿ 8 ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ ಬೈರ್‌ಸ್ಟೋವ್ ಶತಕ ಪೂರೈಸಿದರು.109 ಎಸೆತಗಳಲ್ಲಿ 111 ರನ್ ಗಳಿಸಿದ ಬೈರ್‌ಸ್ಟೋವ್‌ಗೆ ಶಮಿ ಪೆವಿಲಿಯನ್ ಹಾದಿ ತೋರಿಸಿದರು.
ಮುಂದಿನ ಓವರ್‌ನಲ್ಲಿ ನಾಯಕ ಮೊರ್ಗನ್(1) ವಿಕೆಟನ್ನು ಪಡೆದ ಶಮಿ ಇಂಗ್ಲೆಂಡ್‌ಗೆ ತಿರುಗೇಟು ನೀಡಲು ನೆರವಾದರು.