ಪೊಲ್ಯಾಂಡ್‌ನಲ್ಲಿ 200 ಮೀ.ಓಟದಲ್ಲಿ ಚಿನ್ನ ಜಯಿಸಿದ ಹಿಮಾ ದಾಸ್

Update: 2019-07-04 14:53 GMT

ಹೊಸದಿಲ್ಲಿ, ಜು.4: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಪೊಲ್ಯಾಂಡ್‌ನ ಪೋಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ ಟೂರ್ನಮೆಂಟ್‌ನಲ್ಲಿ ಮಹಿಳೆಯರ 200 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಾಷ್ಟ್ರೀಯ ದಾಖಲೆ ವೀರ, ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ಕಂಚಿನ ಪದಕ ತನ್ನದಾಗಿಸಿಕೊಂಡರು.

400 ಮೀ.ಓಟದಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ ಹಾಗೂ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಹಿಮಾ ಕಳೆದ ಕೆಲವು ತಿಂಗಳುಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದರು. ಇದೀಗ ನೋವಿನಿಂದ ಚೇತರಿಸಿಕೊಂಡಿರುವ ಅವರು 200 ಮೀ.ಓಟದ ಸ್ಪರ್ಧೆಯಲ್ಲಿ 23.65 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಹಿಮಾ 200 ಮೀ.ಓಟದಲ್ಲಿ ಈ ವರ್ಷ ಇದೇ ಮೊದಲ ಬಾರಿ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ಇದೇ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ(23.10) ಪ್ರದರ್ಶನ ನೀಡಿದ್ದರು.

ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ ಓಟಗಾರ್ತಿ ವಿ.ಕೆ. ವಿಸ್ಮಯ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ (23.75)ಗುರಿ ತಲುಪಿ ಮೂರನೇ ಸ್ಥಾನ ಪಡೆದಿದ್ದರು.

ಏಶ್ಯನ್ ಚಾಂಪಿಯನ್ ತೇಜಿಂದರಪಾಲ್ ಸಿಂಗ್ ಪುರುಷರ ಶಾಟ್‌ಪುಟ್‌ನಲ್ಲಿ 19.62 ಮೀ.ದೂರಕ್ಕೆ ಶಾಟ್‌ಪುಟ್ ಎಸೆದು ಮೂರನೇ ಸ್ಥಾನ ಪಡೆದರು.

 400 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಮುಹಮ್ಮದ್ ಅನಾಸ್ ಪುರುಷರ 200 ಮೀ.ಓಟದಲ್ಲಿ 20.75 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಕೆ.ಎಸ್. ಜೀವನ್ ಪುರುಷರ 400 ಮೀ. ಓಟದಲ್ಲಿ 47.25 ಸೆಕೆಂಡ್‌ನಲ್ಲಿ ಗುರಿ ತಲುಪಿ ಕಂಚಿನ ಪದಕ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News