ಚಾಂಪಿಯನ್ ಚಿಲಿಗೆ ಸೋಲುಣಿಸಿದ ಪೆರು ಫೈನಲ್ ಗೆ

Update: 2019-07-05 03:36 GMT

ಪೊರ್ಟೊ ಅಲೆಗ್ರೆ, ಜು.4: ಹಾಲಿ ಚಾಂಪಿಯನ್ ಚಿಲಿ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿದ ಪೆರು ಫುಟ್ಬಾಲ್ ತಂಡ 44 ವರ್ಷಗಳ ಬಳಿಕ ಮೊದಲ ಬಾರಿ ಕೋಪಾ ಅಮೆರಿಕ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ತಲುಪಿದೆ. ಬುಧವಾರ ನಡೆದ ಎರಡನೇ ಸೆಮಿ ಫೈನಲ್‌ನಲ್ಲಿ ಪೆರು ತಂಡ ಎಡಿಸನ್ ಪ್ಲೊರೆಸ್(21ನೇ ನಿಮಿಷ), ಯೊಶಿಮರ್ ಯೊಟನ್(38ನೇ ನಿಮಿಷ) ಹಾಗೂ ಪಾವೊಲೊ ಗೆರೆರೊ(90+1ನೇ ನಿಮಿಷ) ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಭರ್ಜರಿ ಜಯ ಸಾಧಿಸಿತು. ಸೆಮಿ ಫೈನಲ್‌ಗೆ ತಲುಪುವ ಮೊದಲು ಪೆರು ತಂಡ 4 ಲೀಗ್ ಪಂದ್ಯಗಳಲ್ಲಿ ಕೇವಲ 3 ಗೋಲುಗಳನ್ನು ಗಳಿಸಿತ್ತು. ಕೊನೆಯ ಗ್ರೂಪ್ ಹಂತದಲ್ಲಿ ಬ್ರೆಝಿಲ್ ವಿರುದ್ಧ 0-5 ಅಂತರದಿಂದ ಹೀನಾಯವಾಗಿ ಸೋತಿದ್ದ ಪೆರು ತಂಡ ನಾಕೌಟ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಕುರಿತು ಯಾರಿಗೂ ವಿಶ್ವಾಸವಿರಲಿಲ್ಲ.

ಆದರೆ ಅದು ಕ್ವಾರ್ಟರ್ ಫೈನಲ್‌ನಲ್ಲಿ ಉರುಗ್ವೆ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಸೆಮಿ ಫೈನಲ್‌ಗೆ ತಲುಪಿ ಗಮನ ಸೆಳೆದಿತ್ತು.

 ಪೆರು ತಂಡದ 0-5 ಅಂತರದ ಸೋಲಿನಲ್ಲಿ ವಿಲನ್ ಆಗಿದ್ದ ಗೋಲ್‌ಕೀಪರ್ ಪೆಡ್ರೊ ಗಲ್ಲೆಸ್ ಉರುಗ್ವೆ ವಿರುದ್ಧ ಪಂದ್ಯದಲ್ಲಿ ಲೂಯಿಸ್ ಸುಯರೆಝ್ ಶೂಟೌಟ್ ಪೆನಾಲ್ಟಿಯನ್ನು ತಡೆದಿದ್ದರು. ಹಲವು ಬಾರಿ ಗೋಲುಗಳನ್ನು ತಡೆದು ತಂಡದ ಗೆಲುವಿಗೆ ನೆರವಾಗಿದ್ದರು.

ಮೊದಲಾರ್ಧದಲ್ಲಿ ಎರಡು ಗೋಲು ಬಿಟ್ಟುಕೊಟ್ಟು ಹಿನ್ನಡೆ ಕಂಡಿದ್ದ ಚಿಲಿ ತಂಡ ಆ ಬಳಿಕ ಚೇತರಿಸಿಕೊಳ್ಳಲಿಲ್ಲ. ಸತತ ಎರಡು ಬಾರಿ ಕೋಪಾ ಅಮೆರಿಕ ಟ್ರೋಫಿ ಜಯಿಸಿದ್ದ ಚಿಲಿಗೆ ಸತತ 3ನೇ ಬಾರಿ ಪ್ರಶಸ್ತಿ ಜಯಿಸುವ ಕನಸು ಈಡೇರಲಿಲ್ಲ. 1945-47ರಲ್ಲಿ ಅರ್ಜೆಂಟೀನ ತಂಡ ಸತತ ಮೂರು ಬಾರಿ ಕೋಪಾ ಅಮೆರಿಕ ಟ್ರೋಫಿಯನ್ನು ಜಯಿಸಿತ್ತು.

ರವಿವಾರ ಮರಕಾನಾ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಪೆರು ತಂಡ ಆತಿಥೇಯ ಬ್ರೆಝಿಲ್ ತಂಡವನ್ನು ಎದುರಿಸಲಿದೆ. ಬ್ರೆಝಿಲ್ ಮೊದಲ ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನವನ್ನು 2-0 ಅಂತರದಿಂದ ಮಣಿಸಿತ್ತು.

ಕಳೆದ ಎರಡು ಆವೃತ್ತಿಗಳಲ್ಲಿ ಫೈನಲ್‌ಗೆ ತಲುಪಿರುವ ಚಿಲಿ ತಂಡ ಶನಿವಾರ ಮೂರನೇ ಸ್ಥಾನಕ್ಕಾಗಿ ಸಾವೊಪೌಲೊದಲ್ಲಿ ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News