ಸೆಮಿಫೈನಲ್‌ಗೆ ಮಳೆ ಅಡ್ಡಿ: ಭಾರತಕ್ಕೆ ಡಿಎಲ್‌ಎಸ್ ಗುರಿ ಎಷ್ಟು ಗೊತ್ತೇ?

Update: 2019-07-09 16:20 GMT

ಮ್ಯಾಂಚೆಸ್ಟರ್, ಜು.9: ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ಮಂಗಳವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ನ್ಯೂಝಿಲ್ಯಾಂಡ್ 46.1 ಓವರ್‌ ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 211 ರನ್ ಗಳಿಸಿದೆ. ರಾಸ್ ಟೇಲರ್(ಔಟಾಗದೆ 67, 85 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಟಾಮ್ ಲಥಾಮ್(ಔಟಾಗದೆ 3) ಕ್ರೀಸ್ ಕಾಯ್ದುಕೊಂಡಿದ್ದರು. ಕಿವೀಸ್ ಸ್ಪರ್ಧಾತ್ಮಕ ಮೊತ್ತದತ್ತ ಸಾಗುತ್ತಿದ್ದಾಗ ಮಳೆ ಆಗಮಿಸಿ ಪಂದ್ಯ ಸ್ಥಗಿತಗೊಂಡಿದೆ.

ಒಂದು ವೇಳೆ ಇಂದು ನ್ಯೂಝಿಲ್ಯಾಂಡ್ ಮತ್ತೆ ಬ್ಯಾಟಿಂಗ್‌ ಮುಂದುವರಿಸದೇ ಇದ್ದರೆ ಡಕ್‌ ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 20 ಓವರ್ ಪಂದ್ಯದಲ್ಲಿ 148 ರನ್ ಹಾಗೂ 46 ಓವರ್‌ ಗಳ ಪಂದ್ಯದಲ್ಲಿ 237 ರನ್ ಗುರಿ ಸಿಗಲಿದೆ.

ಒಂದು ವೇಳೆ ಇಂದು 20 ಓವರ್ ‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ ಮೀಸಲು ದಿನವಾದ ಬುಧವಾರ ನ್ಯೂಝಿಲ್ಯಾಂಡ್ 46.1 ಓವರ್‌ ನಿಂದ ಬ್ಯಾಟಿಂಗ್ ಮುಂದುವರಿಸಲಿದೆ. ಬುಧವಾರದ ಪಂದ್ಯಕ್ಕೂ ಮಳೆ ಅಡ್ಡಿಯಾದ ಪಕ್ಷದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತ ಫೈನಲ್‌ ಗೆ ತೇರ್ಗಡೆಯಾಗಲಿದೆ.

ಇದಕ್ಕೂ ಮೊದಲು ಟಾಸ್ ಜಯಿಸಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭದಲ್ಲಿ ರನ್ ಗಳಿಸಲು ಪರದಾಟ ನಡೆಸಿದ ಕಿವೀಸ್ 3.3 ಓವರ್‌ಗಳಲ್ಲಿ ಕೇವಲ 1 ರನ್ ಗಳಿಸಿದ್ದಾಗ ಆರಂಭಿಕ ಆಟಗಾರ ಗಪ್ಟಿಲ್ ವಿಕೆಟನ್ನು ಕಳೆದುಕೊಂಡಿತು.

ಆಗ ನಿಕೊಲ್ಸ್ ಹಾಗೂ ಟೇಲರ್‌ರೊಂದಿಗೆ ಕೈ ಜೋಡಿಸಿದ ವಿಲಿಯಮ್ಸನ್ ಕ್ರಮವಾಗಿ 2ನೇ ಹಾಗೂ 3ನೇ ವಿಕೆಟ್ ಜೊತೆಯಾಟದಲ್ಲಿ 68 ಹಾಗೂ 65 ರನ್ ಸೇರಿಸಿ ತಂಡವನ್ನು ಆಧರಿಸಿದರು. ಟೂರ್ನಿಯಲ್ಲಿ 4ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ವಿಲಿಯಮ್ಸನ್ ಸ್ಪಿನ್ನರ್ ಚಹಾಲ್ ಎಸೆತದಲ್ಲಿ ಜಡೇಜಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News