100ನೇ ಗೆಲುವು ದಾಖಲಿಸಿದ ರೋಜರ್ ಫೆಡರರ್

Update: 2019-07-11 18:27 GMT

ಲಂಡನ್, ಜು.11: ಎಂಟು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 100ನೇ ಪಂದ್ಯವನ್ನು ಜಯಿಸುವುದರೊಂದಿಗೆ ಅಪರೂಪದ ಸಾಧನೆ ಮಾಡಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 13ನೇ ಬಾರಿ ಸೆಮಿ ಫೈನಲ್‌ಗೆ ತಲುಪಿರುವ ಫೆಡರರ್ ಮುಂದಿನ ಸುತ್ತಿನಲ್ಲಿ ರಫೆಲ್ ನಡಾಲ್ ಸವಾಲನ್ನು ಎದುರಿಸಲಿದ್ದಾರೆ.

 ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ಫೆಡರರ್ ಜಪಾನ್‌ನ ಕೀ ನಿಶಿಕೊರಿ ಅವರನ್ನು 4-6, 6-1, 6-4, 6-4 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ 45ನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದರು.

37ರ ಹರೆಯದ ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಘಟ್ಟ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು. 1991ರಲ್ಲಿ ಯುಎಸ್ ಓಪನ್‌ನಲ್ಲಿ ಜಿಮ್ಮಿ ಕೊನರ್ಸ್ ಈ ಸಾಧನೆ ಮಾಡಿದ್ದರು.

ಫೆಡರರ್ ಹಾಗೂ ನಡಾಲ್ ವೃತ್ತಿಜೀವನದಲ್ಲಿ 39 ಬಾರಿ ಮುಖಾಮುಖಿಯಾಗಿದ್ದಾರೆ. ವಿಂಬಲ್ಡನ್‌ನಲ್ಲಿ ಮೂರು ಬಾರಿ ಮಾತ್ರ ಹೋರಾಟ ನಡೆಸಿದ್ದರು.

 2006 ಹಾಗೂ 2007ರಲ್ಲಿ ನಡೆದ ಮೊದಲೆರಡು ಮುಖಾಮುಖಿಯಲ್ಲಿ ಸ್ವಿಸ್ ಸ್ಟಾರ್ ಫೆಡರರ್ ಫೈನಲ್‌ನಲ್ಲಿ ಜಯ ದಾಖಲಿಸಿದ್ದರು. ನಡಾಲ್ 2008ರಲ್ಲಿ ಐದು ಸೆಟ್‌ಗಳ ಅಂತರದಿಂದ ಫೆಡರರ್‌ಗೆ ಸೋಲುಣಿಸಿದ್ದರು. ಇದು ಶ್ರೇಷ್ಠ ಗ್ರಾನ್‌ಸ್ಲಾಮ್ ಫೈನಲ್ ಆಗಿ ಗುರುತಿಸಿಕೊಂಡಿದೆ. ‘‘ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 100 ಪಂದ್ಯಗಳನ್ನು ಜಯಿಸಿದ ಮೊದಲ ಆಟಗಾರನೆಂದು ನನಗೆ ಗೊತ್ತಿರಲಿಲ್ಲ. ನನ್ನ ಬಳಿ ನಡಾಲ್ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಈ ವರ್ಷದ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ನಡಾಲ್ ನನ್ನ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದರು. ವಿಂಬಲ್ಡನ್‌ನಲ್ಲಿ ಮತ್ತೊಮ್ಮೆ ಅವರ ವಿರುದ್ಧ ಆಡಲು ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಫೆಡರರ್ ಹೇಳಿದ್ದಾರೆ.

  ನಿಶಿಕೊರಿ 1933ರ ಬಳಿಕ ಸೆಮಿ ಫೈನಲ್‌ಗೆ ತಲುಪಿದ ಮೊದಲ ಜಪಾನ್ ಆಟಗಾರನಾಗಬೇಕೆಂಬ ಗುರಿ ಹಾಕಿಕೊಂಡಿದ್ದರು. ಸೆಂಟರ್ ಕೋರ್ಟ್‌ನಲ್ಲಿ 29ರ ಹರೆಯದ ನಿಶಿಕೊರಿ ಮೊದಲ ಸೆಟ್‌ನ್ನು 6-4 ಅಂತರದಿಂದ ಗೆದ್ದುಕೊಂಡು ಮೇಲುಗೈ ಸಾಧಿಸಿದ್ದರು. ಆ ನಂತರ 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಉಳಿದ 3 ಸೆಟ್‌ಗಳಲ್ಲಿ ಜಯ ಸಾಧಿಸಿ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News