ಫಿಫಾ ರ್ಯಾಂಕಿಂಗ್: 57ನೇ ಸ್ಥಾನಕ್ಕೆ ಜಿಗಿದ ಭಾರತೀಯ ಮಹಿಳಾ ಫುಟ್ಬಾಲ್ ತಂಡ

Update: 2019-07-13 18:54 GMT

 ಹೊಸದಿಲ್ಲಿ, ಜು.13: ಕಳೆದ ಕೆಲವು ತಿಂಗಳುಗಳಿಂದ ಅತ್ಯುತ್ತಮ ನಿರ್ವಹಣೆ ತೋರುತ್ತಿರುವ ಭಾರತೀಯ ಮಹಿಳಾ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್‌ನಲ್ಲಿ ಆರು ಸ್ಥಾನಗಳ ಏರಿಕೆ ಕಂಡು 57ನೇ ಸ್ಥಾನಕ್ಕೆ ಜಿಗಿದಿದೆ. ಏಶ್ಯಾದ ದೇಶಗಳ ಪೈಕಿ ಭಾರತೀಯ ಮಹಿಳಾ ತಂಡ 11ನೇ ಸ್ಥಾನದಲ್ಲಿದೆ. ಮಾರ್ಚ್ 29ರಂದು ಬಿಡುಗಡೆ ಮಾಡಲಾದ ಅಂಕಪಟ್ಟಿಯಲ್ಲಿ ಭಾರತೀಯ ಮಹಿಳಾ ತಂಡ 1392 ಅಂಕಗಳನ್ನು ಪಡೆದುಕೊಂಡಿದ್ದರೆ ಸದ್ಯ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ 1422 ಅಂಕಗಳನ್ನು ಪಡೆದುಕೊಂಡಿದೆ. ಜನವರಿಯಿಂದ ತಂಡ 18 ಪಂದ್ಯಗಳನ್ನಾಡಿದ್ದು ಆ ಪೈಕಿ 12ರಲ್ಲಿ ಗೆಲುವು ಸಾಧಿಸಿದೆ. ಐದರಲ್ಲಿ ಸೋಲನುಭವಿಸಿದ್ದರೆ ಒಂದು ಪಂದ್ಯ ಡ್ರಾದಲ್ಲಿ ಕೊನೆಯಾಗಿದೆ. ಹಾಂಕಾಂಗ್, ಇಂಡೋನೇಶಿಯ ಮತ್ತು ಟರ್ಕಿಗೆ ಪ್ರವಾಸ ಕೈಗೊಂಡಿದ್ದ ಮಹಿಳಾ ತಂಡ ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್ ಮತ್ತು ಎಎಫ್‌ಸಿ ಒಲಿಂಪಿಕ್ ಎರಡನೇ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದೆ. ಜೊತೆಗೆ ಭುವನೇಶ್ವರದಲ್ಲಿ ಹೀರೊ ಗೋಲ್ಡ್ ಕಪ್ ಅಂತರ್‌ರಾಷ್ಟ್ರೀಯ ಪಂದ್ಯಾವಳಿಯ ಉದ್ಘಾಟನಾ ಪಂದ್ಯವನ್ನೂ ಆಡಿದೆ. ಈ ತಿಂಗಳ ಕೊನೆಯಲ್ಲಿ ಭಾರತೀಯ ಮಹಿಳಾ ತಂಡ ಸ್ಪೇನ್‌ನಲ್ಲಿ ಕೊಟಿಫ್ ಕಪ್‌ನಲ್ಲಿ ಆಡಲಿದೆ. ಭಾರತೀಯ ಮಹಿಳಾ ತಂಡದ ರ್ಯಾಂಕಿಂಗ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತಂಡದ ಮುಖ್ಯ ತರಬೇತುದಾರ ಮೇಮೊಲ್ ರಾಕಿ ಆಟಗಾರರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News