​ಐಪಿಎಲ್ ವಿಸ್ತರಣೆ ಸಿದ್ಧತೆ: ತಂಡಗಳೆಷ್ಟು ಗೊತ್ತೇ ?

Update: 2019-07-14 04:15 GMT

ಮುಂಬೈ: ಅದಾನಿ ಉದ್ಯಮ ಸಮೂಹ (ಅಹ್ಮದಾಬಾದ್), ಆರ್‌ಪಿಜಿ-ಸಂಜೀವ್ ಗೊಯಾಂಕಾ ಸಮೂಹ (ಪುಣೆ) ಮತ್ತು ಟಾಟಾ ಸಮೂಹ (ರಾಂಚಿ ಮತ್ತು ಜೆಮ್‌ಶೆಡ್‌ಪುರ) ಹಾಗೂ ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ಇಂಡಿಯನ್ ಪ್ರಿಮಿಯರ್ ಲೀಗ್‌ನ ಅಗ್ರಗಣ್ಯ ಬಿಡ್ಡರ್‌ಗಳಾಗುವ ನಿರೀಕ್ಷೆ ಇದ್ದು, ಐಪಿಎಲ್ ತಂಡಗಳನ್ನು 8 ರಿಂದ 10ಕ್ಕೆ ಹೆಚ್ಚಿಸಲು ನೀಲಿನಕ್ಷೆ ಸಿದ್ಧವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2011ರಲ್ಲಿ ಇಂಥ ವಿಸ್ತರಣೆ ಪ್ರಯತ್ನ ನಡೆಸಿದ್ದರೂ, ಹಲವು ವಿವಾದಗಳ ಕಾರಣದಿಂದ ಎರಡು ವರ್ಷದೊಳಗೆ ಹಳೆ ವ್ಯವಸ್ಥೆಗೆ ಜಾರಿತ್ತು. ಇದೀಗ ಮತ್ತೊಮ್ಮೆ ಇಂಥ ಪ್ರಯತ್ನ ಅಂತಿಮ ಹಂತದಲ್ಲಿದೆ.

ಯೋಜನೆ ಸಿದ್ಧವಾಗಿದೆ, ವಿಸ್ತರಣೆ ನಿಶ್ಚಿತ, ಟೆಂಡರ್ ಪ್ರಕ್ರಿಯೆ ಮತ್ತು ಅದನ್ನು ಹೇಗೆ ಮುಂದುವರಿಸಬೇಕು ಎನ್ನುವುದನ್ನಷ್ಟೇ ನಿರ್ಧರಿಸಬೇಕಿದೆ. ಐಪಿಎಲ್‌ನ ಮುಂದಿನ ಆವೃತ್ತಿಯ ಒಳಗಾಗಿ ಹೊಸ ವ್ಯವಸ್ಥೆ ಜಾರಿಗೆ ಬರುವುದು ಖಚಿತ ಎಂದು ಉನ್ನತ ಮೂಲಗಳು ಹೇಳಿವೆ.

ಐಪಿಎಲ್ ವ್ಯವಸ್ಥೆಯ ಮಾಲಕರು ಮತ್ತು ಉನ್ನತಾಧಿಕಾರಿಗಳು ಲಂಡನ್‌ನಲ್ಲಿ ವಾರಾಂತ್ಯದಲ್ಲಿ ಸಭೆ ಸೇರಿ ಚರ್ಚಿಸಿದ್ದು, 2020ರಲ್ಲಿ ಎರಡು ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವುದರಿಂದ ಐಪಿಎಲ್‌ಗೆ ಪ್ರಯೋಜನವಾಗಲಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

"ಐಪಿಎಲ್ ಸಹಜ ಬೆಳವಣಿಗೆಗೆ ಅವಕಾಶವಿದೆ. ಹಲವು ಕಾರಣಗಳಿಗಾಗಿ ಐಪಿಎಲ್ ವಿಸ್ತರಿಸಲೇಬೇಕು ಎಂಬ ಸ್ಥಿತಿ ಇದೆ. ಮುಂದಿನ ಹಕ್ಕುಗಳ ಸೀಸನ್‌ನಲ್ಲಿ ಡಿಜಿಟಲ್ ಆದಾಯ ಮೂರು ಪಟ್ಟು ಹೆಚ್ಚಳದ ನಿರೀಕ್ಷೆ ಇದೆ" ಎಂದು ಮೂಲಗಳು ಹೇಳಿವೆ.

ಐಪಿಎಲ್ ಫ್ರಾಂಚೈಸಿಗಳು ಮತ್ತು ಹಕ್ಕುದಾರರ ಸಭೆ ಲಂಡನ್‌ನಲ್ಲಿ ನಡೆದಿರುವುದನ್ನು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News