ಕಪಿಲ್‌ದೇವ್ ನೇತೃತ್ವದ ತಾತ್ಕಾಲಿಕ ಸಮಿತಿಗೆ ಭಾರತದ ಕೋಚ್ ಆಯ್ಕೆ ಮಾಡುವ ಹೊಣೆಗಾರಿಕೆ?

Update: 2019-07-18 05:59 GMT

ಮುಂಬೈ, ಜು.18: ಕಪಿಲ್‌ದೇವ್ ನೇತೃತ್ವದ ತಾತ್ಕಾಲಿಕ ಸಮಿತಿ ಟೀಮ್ ಇಂಡಿಯಾದ ರಾಷ್ಟ್ರೀಯ ಕೋಚ್ ಆಯ್ಕೆ ಮಾಡುವ ಜವಾಬ್ದಾರಿವಹಿಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ ಸುಪ್ರೀಂಕೋರ್ಟ್ ವಿಚಾರಣೆಯ ಬಳಿಕ ಸಮಿತಿ ರಚನೆಯ ಬಗ್ಗೆ ಅಂತಿಮ ನಿರ್ಧಾರ ಹೊರಬರಲಿದೆ. ಜು.30ಕ್ಕೆ ಎಲ್ಲ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಭಾರತೀಯ ಕ್ರಿಕೆಟ್ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಸಚಿನ್ ತೆಂಡುಲ್ಕರ್, ಸೌರವ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯನ್ನು ಮುಂದುವರಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಲು ನಿರ್ಧರಿಸಿದೆ.

 ಭಾರತದ ಮಾಜಿ ನಾಯಕ ಕಪಿಲ್‌ದೇವ್, ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಾಮಸ್ವಾಮಿ ಅವರನ್ನೊಳಗೊಂಡ ತಾತ್ಕಾಲಿಕ ಸಮಿತಿಯು ಡಿಸೆಂಬರ್‌ನಲ್ಲಿ ಭಾರತೀಯ ಮಹಿಳಾ ತಂಡದ ಕೋಚ್ ಆಗಿ ಡಬ್ಲು ವಿ ರಾಮನ್‌ರನ್ನು ಆಯ್ಕೆ ಮಾಡಿತ್ತು.

ಟೀಮ್ ಇಂಡಿಯಾದ ಮುಖ್ಯ ಕೋಚ್‌ರನ್ನು ಆಯ್ಕೆ ಮಾಡುವಂತೆಯೂ ಬಿಸಿಸಿಐ, ಕಪಿಲ್ ನೇತೃತ್ವದ ಸಮಿತಿಯನ್ನು ಸಂಪರ್ಕಿಸಿದೆ. ಸಿಒಎಯಲ್ಲಿ ಅಧ್ಯಕ್ಷ ವಿನೋದ್ ರಾಯ್ ಹಾಗೂ ಭಾರತದ ಮಾಜಿ ನಾಯಕಿ ಡಯಾನಾ ಎಡುಲ್ಜಿ ನೇತೃತ್ವದ ದ್ವಿಸದಸ್ಯ ಸಮಿತಿಯಿದೆ. ಡಯಾನಾ ಮಹಿಳಾ ಕೋಚ್ ಆಯ್ಕೆ ಪ್ರಕ್ರಿಯೆ ಅಸಾಂವಿಧಾನಿಕವಾಗಿತ್ತು ಎಂದು ಈ ಹಿಂದೆ ಟೀಕಿಸಿದ್ದರು. ಕ್ರಿಕೆಟ್ ಸಲಹಾ ಸಮಿತಿಗೆ(ಸಿಎಸಿ)ಮಾತ್ರ ಕೋಚ್ ಆಯ್ಕೆ ಮಾಡುವ ಅಧಿಕಾರವಿದೆ ಎಂದು ಡಯಾನಾ ಹೇಳಿದ್ದರು.

ಬಿಸಿಸಿಐ ಮಂಗಳವಾರ ಮುಖ್ಯ ಕೋಚ್ ಸಹಿತ ಭಾರತದ ಪುರುಷರ ತಂಡದ ಸಹಾಯಕ ಸಿಬ್ಬಂದಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ಕೋಚ್ ಅಭ್ಯರ್ಥಿಗಳು 60 ವರ್ಷ ಮೀರಿರಬಾರದು ಹಾಗೂ ಕನಿಷ್ಠ 2 ವರ್ಷ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕೋಚ್ ನೀಡಿದ ಅನುಭವಿಯಾಗಿರಬೇಕೆಂದು ಮಾನದಂಡ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News