ಇರಾನ್ ಡ್ರೋನ್ ಹೊಡೆದುರುಳಿಸಿದ ಅಮೆರಿಕ: ಡೊನಾಲ್ಡ್ ಟ್ರಂಪ್

Update: 2019-07-19 18:24 GMT

ವಾಶಿಂಗ್ಟನ್, ಜು. 19: ಹೋರ್ಮುಝ್ ಜಲಸಂಧಿಯ ಸಮೀಪದಲ್ಲಿರುವ ‘ಯುಎಸ್‌ಎಸ್ ಬಾಕ್ಸರ್’ ಯುದ್ಧನೌಕೆಯತ್ತ ಬರುತ್ತಿದ್ದ ಇರಾನ್‌ನ ಡ್ರೋನ್ ಒಂದನ್ನು ಅಮೆರಿಕ ನಾಶಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಇರಾನ್ ಮತ್ತು ಅಮೆರಿಕಗಳ ನಡುವಿನ ಶೀತಲ ಯುದ್ಧ ಮತ್ತೊಮ್ಮೆ ಉದ್ವಿಗ್ನತೆಗೆ ತಿರುಗಿದೆ.

ಆ ಡ್ರೋನ್ ಯುದ್ಧ ನೌಕೆ ಮತ್ತು ಅದರ ಸಿಬ್ಬಂದಿಗೆ ಬೆದರಿಕೆಯಾಗಿತ್ತು ಎಂದು ಟ್ರಂಪ್ ಶ್ವೇತಭವನದಲ್ಲಿ ಗುರುವಾರ ಹೇಳಿದರು. ಈ ಜಲಸಂಧಿಯ ಮೂಲಕ ಹಾದು ಹೋಗುವ ತಮ್ಮ ನೌಕೆಗಳ ರಕ್ಷಣೆ ಮಾಡಿಕೊಳ್ಳುವಂತೆ ನಾನು ಬೇರೆ ದೇಶಗಳಿಗೂ ಕರೆ ನೀಡುತ್ತೇನೆ ಎಂದು ಅವರು ಹೇಳಿದರು.

‘‘ಇರಾನ್‌ನ ಡ್ರೋನ್ ನಮ್ಮ ಯದ್ಧ ನೌಕೆಯ ಸಮೀಪ, ತುಂಬಾ ಸಮೀಪ ಬರುತ್ತಿತ್ತು. ಒಂದು ಹಂತದಲ್ಲಿ ಅದು ಸುಮಾರು 1,000 ಮೀಟರ್ ದೂರದಲ್ಲಿತ್ತು. ದೂರ ಹೋಗುವಂತೆ ನೌಕೆಯ ಸಿಬ್ಬಂದಿ ಪದೇ ಪದೇ ನೀಡಿದ ಸೂಚನೆಯನ್ನು ಅದು ಪಾಲಿಸಲಿಲ್ಲ. ಅದು ನೌಕೆ ಮತ್ತು ಅದರ ಸಿಬ್ಬಂದಿಗೆ ಬೆದರಿಕೆಯಾಗಿತ್ತು. ಆಗ ನಮ್ಮ ಯುದ್ಧ ನೌಕೆಯು ರಕ್ಷಣಾತ್ಮಕ ಕ್ರಮವನ್ನು ತೆಗೆದುಕೊಂಡಿತು’’ ಎಂದು ಟ್ರಂಪ್ ಹೇಳಿದರು.

‘‘ಯುದ್ಧ ನೌಕೆ ಬಾಕ್ಸರ್ ಅಂತರ್‌ ರಾಷ್ಟ್ರೀಯ ಜಲಪ್ರದೇಶದಲ್ಲಿತ್ತು ಹಾಗೂ ಅದು ನಿಗದಿತ ಕಾರ್ಯಕ್ರಮದಂತೆ ಹೋರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಬೇಕಾಗಿತ್ತು. ಆಗ ಡ್ರೋನ್ ಒಂದು ಬೆದರಿಕೆ ಹುಟ್ಟಿಸುವ ರೀತಿಯಲ್ಲಿ ಅದರ ಸಮೀಪಕ್ಕೆ ಬಂತು. ಅದನ್ನು ನೌಕೆಯು ಹೊಡೆದುರುಳಿಸಿತು’’ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ವಕ್ತಾರ ಜೊನಾಥನ್ ಹಾಫ್‌ಮನ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ನಮ್ಮ ಯಾವುದೇ ಡ್ರೋನ್ ನಾಪತ್ತೆಯಾಗಿಲ್ಲ

ಅಮೆರಿಕ ತನ್ನದೇ ಡ್ರೋನನ್ನು ತಪ್ಪಾಗಿ ಹೊಡೆದುರುಳಿಸಿರಬಹುದು: ಇರಾನ್

ನಾವು ಇತ್ತೀಚೆಗೆ ಯಾವುದೇ ಡ್ರೋನನ್ನು ಕಳೆದುಕೊಂಡಿಲ್ಲ ಎಂದು ಇರಾನ್‌ನ ಉಪ ವಿದೇಶ ಸಚಿವ ಅಬ್ಬಾಸ್ ಅರಾಗ್ಚಿ ಶುಕ್ರವಾರ ಹೇಳಿದ್ದಾರೆ ಹಾಗೂ ಅಮೆರಿಕ ತನ್ನದೇ ಡ್ರೋನನ್ನು ತಪ್ಪಾಗಿ ಹೊಡೆದುರುಳಿಸಿರಬಹುದು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

‘‘ಹೋರ್ಮುಝ್ ಜಲಸಂಧಿಯಲ್ಲಿ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ನಾವು ಯಾವುದೇ ಡ್ರೋನನ್ನು ಕಳೆದುಕೊಂಡಿಲ್ಲ. ಯುಎಸ್‌ಎಸ್ ಬಾಕ್ಸರ್ ತನ್ನದೇ ಡ್ರೋನನ್ನು ಕಣ್ತಪ್ಪಿನಿಂದ ಹೊಡೆದುರುಳಿಸಿರಬಹುದು’’ ಎಂಬುದಾಗಿ ಅರಾಗ್ಚಿ ಟ್ವೀಟ್ ಮಾಡಿದ್ದಾರೆ.

ಇರಾನ್‌ನ ಡ್ರೋನನ್ನು ತಾನು ಹೊಡೆದುರುಳಿಸಿರುವುದಾಗಿ ಅಮೆರಿಕ ಹೇಳಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News