‘ಅವರನ್ನು ವಾಪಸ್ ಕಳುಹಿಸಿ’ ಎಂದು ಘೋಷಣೆ ಕೂಗಿದ ಟ್ರಂಪ್ ಬೆಂಬಲಿಗರು: ಘೋಷಣೆಯಿಂದ ಬೇಸರವಾಗಿದೆ ಎಂದ ಟ್ರಂಪ್

Update: 2019-07-19 18:21 GMT

ವಾಶಿಂಗ್ಟನ್, ಜು. 19: ನಾರ್ತ್ ಕರೋಲಿನದ ಗ್ರೀನ್‌ವಿಲ್‌ನಲ್ಲಿ ಬುಧವಾರ ರಾತ್ರಿ ನಡೆದ ಸಭೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೊಮಾಲಿಯ ಸಂಜಾತ ಸಂಸದೆ ಇಲ್ಹಾನ್ ಉಮರ್ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ, ಅಧ್ಯಕ್ಷರ ಬೆಂಬಲಿಗರು ‘‘ಅವರನ್ನು ವಾಪಸ್ ಕಳುಹಿಸಿ’’ ಎಂಬುದಾಗಿ ಘೋಷಣೆಗಳನ್ನು ಕೂಗಿದ್ದಾರೆ.

ಆದರೆ, ತನ್ನ ಬೆಂಬಲಿಗರ ವರ್ತನೆಯಿಂದ ತನಗೆ ಬೇಸರವಾಗಿದೆ ಎಂಬುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

ಅದೇ ವೇಳೆ, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಕೋರುತ್ತಿರುವ ಟ್ರಂಪ್, ಇದನ್ನೇ ತನ್ನ ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಬಹುದು ಎಂಬ ಭೀತಿ ಟ್ರಂಪ್‌ರ ಪಕ್ಷ ರಿಪಬ್ಲಿಕನ್‌ನ ನಾಯಕರನ್ನು ಕಾಡುತ್ತಿದೆ.

‘‘ಇದು ನಮ್ಮನ್ನು ನಿರೂಪಿಸುವುದಿಲ್ಲ’’ ಎಂದು ರಿಪಬ್ಲಿಕನ್ ಸಂಸದ ಮಾರ್ಕ್ ವಾಕರ್ ಹೇಳಿದ್ದಾರೆ. ‘‘ಅದು ನಮ್ಮ ಪ್ರಚಾರ ಸಾಮಗ್ರಿ ಆಗಬೇಕೆಂದೇನೂ ಇಲ್ಲ’’ ಎಂದು ಅವರು ನುಡಿದರು.

ಟ್ರಂಪ್‌ರ ಬೆಂಬಲಿಗರು ಬಳಿಸಿದ ಭಾಷೆಯನ್ನು ಅವರ ರಿಪಬ್ಲಿಕನ್ ಪಕ್ಷೀಯರು ತಿರಸ್ಕರಿಸಿದ್ದಾರೆ.

‘‘ನನ್ನ ಬೆಂಬಲಿಗರ ವರ್ತನೆಯಿಂದ ನನಗೆ ನೋವಾಗಿದೆ. ಅದನ್ನು ನಾನು ಒಪ್ಪುವುದಿಲ್ಲ. ಆದರೆ, ಅದನ್ನು ನಾನು ಹೇಳಿಲ್ಲ. ಅವರು ಹೇಳಿದ್ದು. ಅದನ್ನು ನಾನು ಒಪ್ಪುವುದಿಲ್ಲ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಟ್ರಂಪ್ ಓರ್ವ ಫ್ಯಾಶಿಸ್ಟ್: ಇಲ್ಹಾನ್ ಉಮರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ‘ಫ್ಯಾಶಿಸ್ಟ್’ ಎಂಬುದಾಗಿ ಸೊಮಾಲಿಯ ಸಂಜಾತ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸದೆ ಇಲ್ಹಾನ್ ಉಮರ್ ಗುರುವಾರ ಬಣ್ಣಿಸಿದ್ದಾರೆ.

ಬುಧವಾರ ರಾತ್ರಿ ಟ್ರಂಪ್ ಭಾಗವಹಿಸಿದ ಸಭೆಯೊಂದರಲ್ಲಿ ಟ್ರಂಪ್ ಬೆಂಬಲಿಗರು ಇಲ್ಹಾನ್ ಉಮರ್‌ರನ್ನು ಗುರಿಯಾಗಿಸಿ, ‘ಅವರನ್ನು ವಾಪಸ್ ಕಳುಹಿಸಿ’ ಎಂಬ ಘೋಷಣೆಗಳನ್ನು ಕೂಗಿರುವುದಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ತನ್ನ ಕ್ಷೇತ್ರ ಮಿನಸೋಟಕ್ಕೆ ಇಲ್ಹಾನ್ ಗುರುವಾರ ರಾತ್ರಿ ಹಿಂದಿರುಗಿದಾಗ ಅವರಿಗೆ ವಿಭಿನ್ನ ಸ್ವಾಗತವೊಂದು ಎದುರಾಗಿತ್ತು. ವಿಮಾನ ನಿಲ್ದಾಣದಲ್ಲಿ ಸೇರಿದ ಅವರ ಬೆಂಬಲಿಗರ ಗುಂಪುಗಳು ಅವರ ಪರವಾಗಿ ಘೋಷಣೆಗಳನ್ನು ಕೂಗಿದವು.

‘‘ಸೊಮಾಲಿ ವಲಸಿಗ ನಿರಾಶ್ರಿತೆಯೊಬ್ಬಳು ಸಂಸತ್ತು ಕಾಂಗ್ರೆಸ್‌ಗೆ ಹೋಗಿರುವುದು ಅಧ್ಯಕ್ಷರನ್ನು ದುಃಸ್ವಪ್ನದಂತೆ ಕಾಡುತ್ತಿದೆ’’ ಎಂದು ಅವರು ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News